ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದ ತನಿಖೆ ಎದುರಿಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪುನರುಚ್ಚರಿಸಿದ್ದಾರೆ.
ಪ್ರಕರಣದಲ್ಲಿ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರ ತನಿಖೆಗೆ ವಿಶೇಷ ನ್ಯಾಯಾಲಯ ಆದೇಶಿಸಿದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದೇ ತನಿಖೆಗೆ ಹೆದರುವುದಿಲ್ಲ. ಕಾನೂನು ಹೋರಾಟ ಮಾಡಲು ತಯಾರಾಗಿದ್ದೇವೆ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಈಗಾಗಲೇ ಹೇಳಿದ್ದೇನೆ. ತನಿಖೆಗೆ ನಾನು ಹೆದರುವುದಿಲ್ಲ. ನಾನು ಕಾನೂನು ಹೋರಾಟಕ್ಕೆ ಸಿದ್ಧ. ನಾನು ಇದನ್ನು ನಿನ್ನೆಯೇ ಹೇಳಿದ್ದೆ ಮತ್ತು ಇಂದು ಕೂಡ ಅದನ್ನು ಪುನರುಚ್ಚರಿಸುತ್ತಿದ್ದೇನೆ ಎಂದು ತಿಳಿಸಿದರು.
ಮೈಸೂರಿನಲ್ಲಿಯೇ ದೂರು ದಾಖಲಾಗಿದ್ದು, ಮುಡಾ ಕೂಡ ಮೈಸೂರು ನಗರದಲ್ಲೇ ಇರುವುದರಿಂದ ಹಾಗೂ ದೂರುದಾರರು ಮೈಸೂರಿನವರಾಗಿದ್ದರಿಂದ ಮೈಸೂರು ಲೋಕಾಯುಕ್ತಕ್ಕೆ ತನಿಖೆ ನಡೆಸಲು ಆದೇಶ ಮಾಡಿರಬೇಕು ಎಂದು ಭಾವಿಸಿದ್ದೇನೆ ಎಂದರು. ಸಂಪೂರ್ಣ ಆದೇಶದ ಪ್ರತಿ ಸಿಕ್ಕಿದ ಮೇಲೆ ವಕೀಲರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಲು ರಾಜ್ಯಪಾಲ ತಾವರಚಂದ ಗೆಹ್ಲೋಟ್ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಮರುದಿನವೇ ಈ ಆದೇಶ ಬಂದಿದೆ.
ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಬುಧವಾರ ಆದೇಶ ಪ್ರಕಟಿಸಿದ್ದಾರೆ.
ನ್ಯಾಯಾಲಯವು ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 156 (3) ಅಡಿಯಲ್ಲಿ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನಗಳನ್ನು ನೀಡಿದೆ (ಅದು ಅರಿಯಬಹುದಾದ ಅಪರಾಧದ ತನಿಖೆಗೆ ಆದೇಶಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್‌ಗೆ ನೀಡುತ್ತದೆ). ಇದು ಡಿಸೆಂಬರ್ 24 ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.
ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ
”ಹೈಕೋರ್ಟ್ ನಂತರ ಜನಪ್ರತಿನಿಧಿಗಳ ನ್ಯಾಯಾಲಯವೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಒಪ್ಪಿಗೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಬೇಕು. ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ನ್ಯಾಯಯುತ ತನಿಖೆ ಅಸಾಧ್ಯ. ಇನ್ನೂ ಯಾರ ಆದೇಶಕ್ಕಾಗಿ ಕಾಯುತ್ತಿದ್ದೀರಿ, ಸಿದ್ದರಾಮಯ್ಯ ಅವರೇ ತಕ್ಷಣ ರಾಜೀನಾಮೆ ನೀಡಿ” ಎಂದು ಕರ್ನಾಟಕ ಬಿಜೆಪಿ ಒತ್ತಾಯಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ