
ತಿರುವನಂತಪುರಂ: ಶಬರಿಮಲೆ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಗೆ ಮುನ್ನ ಕೇರಳ ಸರ್ಕಾರವು ಈ ಬಾರಿ ಆನ್‌ಲೈನ್ ಬುಕಿಂಗ್ ಮೂಲಕ ಯಾತ್ರಾರ್ಥಿಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ದಿನಕ್ಕೆ ಗರಿಷ್ಠ 80,000 ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
“ಈ ಬಾರಿ ಶಬರಿಮಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ಇರುವುದಿಲ್ಲ. ಯಾತ್ರಿಗಳು ಬುಕ್ ಮಾಡದೆ ಬಂದರೆ ನಾವು ಪರಿಶೀಲಿಸುತ್ತೇವೆ. ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ” ಎಂದು ದೇವಸ್ವಂ ಸಚಿವ ವಿ.ಎನ್. ವಾಸವನ್ ತಿಳಿಸಿದ್ದಾರೆ.
ವರ್ಚುವಲ್ ಕ್ಯೂ ಯಾತ್ರಿಕರಿಗೆ ಬುಕಿಂಗ್ ಸಮಯದಲ್ಲಿ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸುತ್ತದೆ. ಹೀಗಾಗಿ, ಯಾತ್ರಿಕರು ಕಡಿಮೆ ದಟ್ಟಣೆಯ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡಬಹುದು. ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಜನದಟ್ಟಣೆ ಇರುವ ಸಮಯದಲ್ಲಿ ವಾಹನಗಳನ್ನು ನಿಯಂತ್ರಿಸಬೇಕಾದರೆ ಅಗತ್ಯ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಶಬರಿಮಲೆಗೆ ಹೋಗುವ ರಸ್ತೆಗಳು ಮತ್ತು ಪಾರ್ಕಿಂಗ್ ಮೈದಾನಗಳ ದುರಸ್ತಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶುಧಿ ಸೇನಾ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡುತ್ತಾರೆ ಮತ್ತು ಅಗತ್ಯ ತರಬೇತಿ ನೀಡಲಾಗುತ್ತದೆ. ಶಬರಿ ಅತಿಥಿ ಗೃಹ ನಿರ್ವಹಣೆ ಅಕ್ಟೋಬರ್ 31ಕ್ಕೆ ಪೂರ್ಣಗೊಳ್ಳಲಿದ್ದು, ಪ್ರಣವಂ ಅತಿಥಿ ಗೃಹದ ನವೀಕರಣ ಪೂರ್ಣಗೊಂಡಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಲಕ್ಷಾಂತರ ಭಕ್ತರು ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದರಿಂದ ಅದನ್ನು ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳದೇ ಇದ್ದಿದ್ದರಿಂದ ಅವ್ಯವಸ್ಥೆ ಉಂಟಾಗಿತ್ತು. ಇದರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಭಕ್ತರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಆನ್‌ಲೈನ್ ಬುಕ್ ಮಾಡಿದವರಿಗೆ ಮಾತ್ರ ಅವಕಾಶ ಕಲ್ಪಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ