ಮುಂಬೈಯಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ; ದೆಹಲಿಯಲ್ಲಿ ಲ್ಯಾಂಡಿಂಗ್‌

ಮುಂಬೈ: ಮುಂಬೈಯಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ (ಅಕ್ಟೋಬರ್‌ 14) ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಸುರಕ್ಷಿತವಾಗಿ ಇಳಿಸಲಾಯಿತು.
ಬಾಂಬ್‌ ಬೆದರಿಕೆಯ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಸುಮಾರು 2 ಗಂಟೆಗೆ ಮುಂಬೈಯಿಂದ ಹೊರಟ ವಿಮಾನವನ್ನು ತಕ್ಷಣವೇ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್‌ ಮಾಡಲಾಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ ಎಂದು ತಿಳಿಸಲಾಗಿದೆ.
ನ್ಯೂಯಾರ್ಕ್‌ಗೆ ಹೊರಟಿದ್ದ ಈ ವಿಮಾನದಲ್ಲಿ ಬಾಂಬ್‌ ಇರಿಸಿದ್ದಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಬೆದರಿಕೆಯ ಸಂದೇಶ ಬಂದಿದೆ ಎಂದು ಮೂಲಗಳು ತಿಳಿಸಿವೆ. ʼʼಅಕ್ಟೋಬರ್ 14ರಂದು ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳವ ಎಐ 119 (AI119) ವಿಮಾನಕ್ಕೆ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಸರ್ಕಾರದ ಭದ್ರತಾ ನಿಯಂತ್ರಣ ಸಮಿತಿಯ ಸೂಚನೆಯ ಮೇರೆಗೆ ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆʼʼ ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement