
ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದ ವಕೀಲ ಮತ್ತು ಪೀಠದ ನಡುವಿನ ತೀವ್ರ ಮಾತಿನ ಚಕಮಕಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಾಕ್ಷಿಯಾಯಿತು
ನ್ಯಾಯಾಧೀಶರ ಹೆಸರನ್ನು ಬಳಸಬೇಡಿ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಸಲಹೆ ನೀಡಿತು. ಆದರೆ ಅವರು ತಮ್ಮ ಮಾತು ಕೇಳಬೇಕು ಎಂದು ಒತ್ತಾಯಿಸಿದರು. ನಂತರ ಬಿಸಿಯಾದ ವಿನಿಮಯ ನಡೆಯಿತು. ಇದರಿಂದ ಕೋಪಗೊಂಡ ಸುಪ್ರೀಂ ಕೋರ್ಟ್ ಪೀಠವು ಅರ್ಜಿದಾರರನ್ನು ನ್ಯಾಯಾಲಯದಿಂದ ಹೊರಹಾಕಲು ಭದ್ರತಾ ಸಿಬ್ಬಂದಿಗೆ ಸೂಚಿಸಿತು.
ಈಗ ರಾಜ್ಯಸಭಾ ಸದಸ್ಯರಾಗಿರುವ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಅರುಣ ರಾಮಚಂದ್ರ ಹುಬ್ಳಿಕರ್ ಎಂಬವರು ಅರ್ಜಿ ಸಲ್ಲಿಸಿದ್ದರು. ಸೇವಾ ವಿವಾದಕ್ಕೆ ಸಂಬಂಧಿಸಿದ ಆದೇಶದಲ್ಲಿ ನಿವೃತ್ತ ಸಿಜೆಐ ಗೊಗೊಯ್ ಅವರ ಮಧ್ಯಪ್ರವೇಶದಿಂದ ತಮ್ಮ ಜೀವನ ದುಸ್ತರವಾಗಿದೆ ಎಂದು ಅರ್ಜಿದಾರರು ಮಂಗಳವಾರ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶಚಂದ್ರ ಶರ್ಮಾ ಅವರ ಪೀಠದ ಮುಂದೆ ವಾದಿಸಿದರು. ಆದರೆ ಪೀಠವು ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು.

ಪ್ರಕರಣದಲ್ಲಿ ಏನೂ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು. ಆದಾಗ್ಯೂ, ಹುಬ್ಳಿಕರ್ ಅವರು ಮಾಜಿ ಮುಖ್ಯ ನ್ಯಾಯಮೂರ್ತಿಯನ್ನು ದೂಷಿಸುತ್ತಲೇ ಇದ್ದರು. ಹಾಗೂ ತಮ್ಮ ಮನವಿಯನ್ನು ನ್ಯಾಯಾಲಯವು ಆಲಿಸಬೇಕು ಎಂದು ಒತ್ತಾಯಿಸಿದರು.
“ನಾವಿದಕ್ಕೆ ಇತಿಶ್ರೀ ಹಾಡಲು ಹೊರಟಿದ್ದೇವೆ. ಒಂದರ ನಂತರ ಒಂದರಂತೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ” ಎಂದು ನ್ಯಾಯಾಲಯ ಆರಂಭದಲ್ಲಿ ನುಡಿಯಿತು.
ನಾವು ದಂಡ ವಿಧಿಸಲಿದ್ದೇವೆ. ನ್ಯಾಯಮೂರ್ತಿಗಳ ಹೆಸರನ್ನು ಪ್ರಸ್ತಾಪಿಸಬೇಡಿ. ನಿಮ್ಮ ಪ್ರಕರಣದಲ್ಲಿ ಏನೂ ಇಲ್ಲ” ಎಂದು ಪೀಠವು ಹೇಳಿತು.
ಆಗ ಹುಬ್ಳೀಕರ್ ಅವರು “ಏನೂ ಇಲ್ಲ? ಹಾಗೆ ಹೇಳಲು ಹೇಗೆ ಸಾಧ್ಯ? ಅದು ನನ್ನ ವಿರುದ್ಧದ ಅನ್ಯಾಯವಾಗಿದೆ. ನನಗೆ ನ್ಯಾಯ ಸಿಗಬೇಕು” ಎಂದರು. ಆಗ ಅರ್ಜಿ ವಜಾಗೊಳಿಸುವುದಾಗಿ ನ್ಯಾಯಾಲಯ ಪುನರುಚ್ಚರಿಸಿತು. “ಕ್ಷಮಿಸಿ, ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಿಮ್ಮ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ” ಎಂದಿತು.
“ನೀವು ಕ್ಷಮಿಸಿ ಎಂದು ಹೇಗೆ ಹೇಳುತ್ತೀರಿ? ಈ ನ್ಯಾಯಾಲಯವು ನನ್ನ ಜೀವನವನ್ನು ಶೋಚನೀಯಗೊಳಿಸಿದೆ,” ಎಂದು ಉದ್ವೇಗದಲ್ಲಿ ಹುಬ್ಳೀಕರ್ ಹೇಳಿದರು.
ಆಗ ನ್ಯಾಯಮೂರ್ತಿ ಬೇಲಾ ಅವರು ಹುಬ್ಳೀಕರ್ ಅವರನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ಯುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. “ಭದ್ರತಾ ಸಿಬ್ಬಂದಿಯನ್ನು ಕರೆಯಿರಿ. ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮನ್ನು ಒತ್ತಾಯಿಸದಿರಿ. ಇನ್ನು ಒಂದೇ ಒಂದು ಮಾತನಾಡಿದರೂ ನೀವು ಹೊರಗೆ ಹೋಗಬೇಕಾಗುತ್ತದೆ” ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು. ಇದಕ್ಕೂ ಮಣಿಯದ ಹುಬ್ಳೀಕರ್ “ಮೇಡಂ, ನೀವು ನನಗೆ ಅನ್ಯಾಯ ಮಾಡುತ್ತಿದ್ದೀರಿ. ದೂರುದಾರರಿಗೆ ನೋಟಿಸ್ ನೀಡಿದರೆ ಆಗುವ ತೊಂದರೆ ಏನು?” ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ನ್ಯಾಯಾಲಯ “ಭದ್ರತಾ ಸಿಬ್ಬಂದಿ ದಯವಿಟ್ಟು ಇವರನ್ನು ಹೊರಗೆ ಕರೆದೊಯ್ಯಿರಿ” ಎಂದಿತು. ಆಗ ಬಳಿಕ ಭದ್ರತಾ ಸಿಬ್ಬಂದಿ ಅವರನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ದರು.
ಹುಬ್ಳೀಕರ್ ಅವರು ನ್ಯಾಯಾಲಯದ ಕೋಪವನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಸುಪ್ರೀಂ ಕೋರ್ಟ್ ಮತ್ತೊಂದು ಪೀಠದ ಕೋಪಕ್ಕೆ ತುತ್ತಾಗಿದ್ದರು. ನ್ಯಾಯಮೂರ್ತಿ ಗೊಗೋಯ್ ಅವರನ್ನು ಹೇಗೆ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ ಎಂದು ಹುಬ್ಳೀಕರ್ ಅವರನ್ನು ಉದ್ದೇಶಿಸಿ ಹಾಲಿ ಸಿಜೆಐ ಡಿ ವೈ ಚಂದ್ರಚೂಡ ಪ್ರಶ್ನಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ