ನವದೆಹಲಿ: ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ಏಳು ವಿಮಾನಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಬಂದ ನಂತರ ಎರಡು ಅಂತಾರಾಷ್ಟ್ರೀಯ ವಿಮಾನಗಳು ತುರ್ತು ಭೂಸ್ಪರ್ಶ ಮಾಡಬೇಕಾಯಿತು.
ಸಾಮಾಜಿಕ ಮಾಧ್ಯಮಗಳ ಮೂಲಕ ಅವುಗಳಿಗೆ ಬಾಂಬ್ ಬೆದರಿಕೆ ಬಂದಿತ್ತು ಎಂದು ಹೇಳಲಾಗಿದೆ. ಅಯೋಧ್ಯೆ ಮೂಲಕ ಜೈಪುರದಿಂದ ಬೆಂಗಳೂರಿಗೆ ಬರುವ ವಿಮಾನ, ದೆಹಲಿಯಿಂದ ಚಿಕಾಗೊಗೆ ಹೋಗುವ ವಿಮಾನ , ಮಧುರೈನಿಂದ ಸಿಂಗಪುರಕ್ಕೆ ತೆರಳುತ್ತಿದ್ದ ವಿಮಾನ ಹೀಗೆ ಏರ್ ಇಂಡಿಯಾದ ಮೂರು ವಿಮಾನಗಳು, ದರ್ಭಂಗಾದಿಂದ ಮುಂಬೈಗೆ ಸಂಚರಿಸಿದ ಸ್ಪೈಸ್ ಜೆಟ್ ವಿಮಾನ ಹಾಗೂ ಸಿಲಿಗುರಿಯಿಂದ ಬೆಂಗಳೂರಿಗೆ ಹೊರಟಿದ್ದ ಆಕಾಶ ವಿಮಾನ, ಸೌದಿ ಅರೇಬಿಯಾದ ದಮಾಮ್‌ನಿಂದ ಲಖನೌಗೆ ಬರುತ್ತಿದ್ದ ಇಂಡಿಗೋ ವಿಮಾನ, ಅಮೃತಸರ-ಡೆಹರಾಡೂನ್-ದೆಹಲಿ ಅಲೈಯನ್ಸ್ ವಿಮಾನಗಳಿಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಬೆದರಿಕೆ ಸಂದೇಶಗಳು ಬಂದಿದ್ದವು ಎಂದು ಮೂಲಗಳು ತಿಳಿಸಿವೆ.
ದೆಹಲಿಯಿಂದ ಚಿಕಾಗೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಕೆನಡಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿ, ತಪಾಸಣೆ ನಡೆಸಲಾಗಿದೆ. ಸೌದಿ ಅರೇಬಿಯಾದ ದಮಾಮ್‌ನಿಂದ ಲಖನೌಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನು ಜೈಪುರದಲ್ಲಿ ತುರ್ತು ಭೂ ಸ್ಪರ್ಶ ಮಾಡಿಸಲಾಗಿದೆ.
ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಮಧ್ಯಾಹ್ನ 2:25 ಗಂಟೆಗೆ ಅಯೋಧ್ಯೆಯಿಂದ ಬೆಂಗಳೂರಿಗೆ ಹೊರಡಬೇಕಿದ್ದ ಈ ವಿಮಾನವು ಸಂಜೆ 5 ಗಂಟೆಗೆ ಸಂಚಾರ ಆರಂಭಿಸಿತು. ಮಧುರೈನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಸಿಂಗಪುರಗೆ ತಲುಪಿದೆ. ಅಮೃತಸರ-ಡೆಹರಾಡೂನ್-ದೆಹಲಿ ವಿಮಾನವನ್ನು ಡೆಹರಾಡೂನ್‌ನಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಸ್ಪೈಸ್ ಜೆಟ್ ವಿಮಾನವು ಮುಂಬೈನಲ್ಲಿ ಮತ್ತು ಆಕಾಶ ವಿಮಾನವು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವ ಮೂಲಕ ನಿಗದಿತ ಸ್ಥಳವನ್ನು ತಲುಪಿವೆ.
‘ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ವಿಮಾನಯಾನ ಭದ್ರತಾ ಸಂಸ್ಥೆ ತಿಳಿಸಿದೆ. ‘ಸೈಬರ್ ಭದ್ರತಾ ಏಜೆನ್ಸಿ ಮತ್ತು ಪೊಲೀಸರ ಸಹಾಯದಿಂದ, ಬೆದರಿಕೆ ಸಂದೇಶ ರವಾನಿಸಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ವಿಮಾನಯಾನ ಭದ್ರತಾ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರ ಸಹ ಮುಂಬೈನಿಂದ ಹೊರಟಿದ್ದ 3 ಅಂತಾರಾಷ್ಟ್ರೀಯ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಅದರಲ್ಲಿ ಒಂದು ವಿಮಾನವು ನವದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇಂಡಿಗೋ ಸಂಸ್ಥೆಯ ಎರಡು ವಿಮಾನಗಳು ವಿಳಂಬವಾಗಿ ಸಂಚಾರ ಆರಂಭಿಸಿದ್ದವು.
ನಿಮ್ಮ ಕಾಮೆಂಟ್ ಬರೆಯಿರಿ