ಮುಂಬೈ : ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) 99 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಮೊದಲ ಪಟ್ಟಿಯಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಟಿಕೆಟ್ ಘೋಷಿಸಲಾಗಿದ್ದು, ಅವರಿಗೆ ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾನ್ಕುಲೆ ಅವರು ಕಮ್ತಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಘಾಟ್‌ಕೋಪರ್ ಪಶ್ಚಿಮದಿಂದ ರಾಮ ಕದಂ, ಚಿಕ್ಲಿಯಿಂದ ಶ್ವೇತಾ ಮಹಾಲೆ ಪಾಟೀಲ, ಭೋಕರ್ ನಿಂದ ಶ್ರೀಜಯ ಅಶೋಕ ಚವಾಣ ಮತ್ತು ಕಂಕಾವ್ಲಿಯಿಂದ ನಿತೀಶ್ ರಾಣೆ ಅವರಿಗೆ ಟಿಕೆಟ್ ನೀಡಲಾಗಿದೆ. ಶ್ರೀಜಯಾ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ಣ ಅವರ ಪುತ್ರಿಯಾಗಿದ್ದು, ಈ ವರ್ಷದ ಫೆಬ್ರವರಿಯಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ಮತಗಳ ಎಣಿಕೆ ನಡೆಯಲಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಹಾಗೂ ಅಜಿತ ಪರವಾರ್ ಅವರ ನೇತೃತ್ವದ ಎನ್‌ಸಿಪಿ ಬಿಜೆಪಿ ಮಿತ್ರ ಪಕ್ಷಗಳಾಗಿದ್ದು,ಮೂರು ಪಕ್ಷಗಳ ಮಹಾಯುತಿ ಘಟಬಂಧನವು ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಿದೆ. ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಕಾಂಗ್ರೆಸ್-ಎನ್‌ಸಿಪಿ-ಎಸ್‌ಪಿ-ಹಾಗೂ ಶಿವಸೇನೆ (ಯುಬಿಟಿ) ಮೈತ್ರಿಕೂಟವಾದ ಮಹಾ ವಿಕಾಸ ಅಘಾಡಿಯಿಂದ ಸವಾಲನ್ನು ಎದುರಿಸುತ್ತಿದೆ, ಮಹಾ ವಿಕಾಸ ಅಘಾಡಿ ಮೈತ್ರಿಕೂಟವು ಲೋಕಸಭೆ ಚುನಾವಣೆಯಲ್ಲಿ ಪಡೆದಿದ್ದ ಫಲಿತಾಂಶವನ್ನು ಪುನರಾವರ್ತಿಸಲು ಬಯಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಸ್ಥಾನಗಳಲ್ಲಿ ವಿರೋಧ ಪಕ್ಷ ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟ 31 ಸ್ಥಾನಗಳನ್ನು ಗೆದ್ದುಕೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ