ನವದೆಹಲಿ: ನ್ಯಾಯಮೂರ್ತಿ ಸಂಜೀವ ಖನ್ನಾ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.
ಸಿಜೆಐ ಚಂದ್ರಚೂಡ್ ಅವರು ಶಿಫಾರಸ್ಸು ಮಾಡಿದ್ದ ನ್ಯಾ. ಸಂಜೀವ್ ಖನ್ನಾ ಅವರ ಹೆಸರನ್ನು ಕೇಂದ್ರ ಸರ್ಕಾರವು ಅನುಮೋದಿಸಿದ ನಂತರ ರಾಷ್ಟ್ರಪತಿ ಭವನದಿಂದ ಅಧಿಕೃತವಾಗಿ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ. ಕಾನೂನು ಮತ್ತು ನ್ಯಾಯ ಇಲಾಖೆಯ ಸ್ವತಂತ್ರ ಉಸ್ತುವಾರಿ ಅರ್ಜುನ್ ಮೇಘವಾಲ್ ಎಕ್ಸ್‌ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರು ನವೆಂಬರ್ 10ರಂದು ನಿವೃತ್ತಿ ಹೊಂದಲಿದ್ದು, 51ನೇ ಸಿಜೆಐ ಆಗಿ ನ್ಯಾಯಮೂರ್ತಿ ಖನ್ನಾ ಅವರು ನವೆಂಬರ್ 11ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಖನ್ನಾ ಅವರ ಅಧಿಕಾರ ಅವಧಿಯು 183 ದಿನಗಳಿರಲಿದ್ದು, 2025ರ ಮೇ 13ಕ್ಕೆ ನಿವೃತ್ತಿ ಹೊಂದಲಿದ್ದಾರೆ.
ನ್ಯಾ. ಖನ್ನಾ ಅವರು 1983ರಲ್ಲಿ ತೆರಿಗೆ, ಸಾಂವಿಧಾನಿಕ ಕಾನೂನು, ಮಧ್ಯಸ್ಥಿಕೆ, ವಾಣಿಜ್ಯ ಮತ್ತು ಪರಿಸರ ಸಂಬಂಧಿ ವಿಚಾರಗಳಲ್ಲಿ ಕಾನೂನು ಪ್ರಾಕ್ಟೀಸ್ ಆರಂಭಿಸಿದ್ದರು. 2004ರಲ್ಲಿ ದೆಹಲಿಯಲ್ಲಿ ಸಿವಿಲ್ ಪ್ರಕರಣಗಳನ್ನು ನಡೆಸಲು ರಾಜ್ಯ ಸರ್ಕಾರದ ವಕೀಲರಾಗಿ ನೇಮಕಗೊಂಡಿದ್ದರು. 2005ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಖನ್ನಾ ಅವರನ್ನು ಮರು ವರ್ಷ ಕಾಯಂಗೊಳಿಸಲಾಗಿತ್ತು. 2019ರ ಜನವರಿ 18ರಂದು ಖನ್ನಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ