ಮುಡಾ ಹಗರಣ : ಮೇಲ್ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಅವರು ತಮ್ಮ ವಿರುದ್ಧದ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದ ತಮ್ಮ ಅರ್ಜಿ ವಜಾ ಮಾಡಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ. ಅರ್ಜಿಯು ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ರಾಜ್ಯಪಾಲರ ಆದೇಶ ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 24ರಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಒಂದು ತಿಂಗಳ ಬಳಿಕ ವಕೀಲ ಶತಭಿಷ್‌ ಶಿವಣ್ಣ ಅವರ ಮೂಲಕ ಮೇಲ್ಮನವಿ ಸಲ್ಲಿಕೆಯಾಗಿದೆ.
ರಾಜ್ಯಪಾಲರ ಆದೇಶವು ವಿವೇಚನಾ ಶೂನ್ಯವಾಗಿಲ್ಲ. ಎಲ್ಲವೂ ಕಾನೂನಿನ ಅನ್ವಯವಾಗಿದೆ. ತನಿಖಾಧಿಕಾರಿಯಿಂದ ಮುಂಚಿತವಾಗಿ ತನಿಖೆ ನಡೆಸಿ ವರದಿ ಪಡೆಯಬೇಕಾದ ಅಗತ್ಯವಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್‌ 17ಎ ಅಡಿ ಖಾಸಗಿ ವ್ಯಕ್ತಿಯೂ ಸಹ ತನಿಖೆಗೆ ಕೋರಿ ಅನುಮತಿ ಪಡೆಯಬಹುದು ಎಂದು ನ್ಯಾಯಾಲಯ ಹೇಳಿತ್ತು.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

ದೂರುದಾರರು ದೂರನ್ನು ಮುಂದುವರಿಸಲು, ರಾಜ್ಯಪಾಲರಿಂದ ಅನುಮೋದನೆ ಪಡೆಯಲು ಸಮರ್ಥರಾಗಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ, ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸುವುದು ರಾಜ್ಯಪಾಲರ ಕರ್ತವ್ಯ. ಆದಾಗ್ಯೂ, ಅವರು ಅಸಾಧಾರಣ ಸಂದರ್ಭಗಳಲ್ಲಿ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳಬಹುದು ಮತ್ತು ಪ್ರಸ್ತುತ ಪ್ರಕರಣವು ಅಂತಹ ಒಂದು ಪ್ರಕರಣವಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
“ವಾಸ್ತವ ಪರಿಸ್ಥಿತಿಯಲ್ಲಿ 17A ಅಡಿಯಲ್ಲಿ ಅನುಮತಿ ಕಡ್ಡಾಯವಾಗಿದೆ. ಆದರೆ, ಖಾಸಗಿ ದೂರುದಾರರ ವಿಚಾರದಲ್ಲಿ BNSS ನ 200 ಅಥವಾ 223 ರ ಅಡಿಯಲ್ಲಿ ಪೊಲೀಸ್ ಅಧಿಕಾರಿಯು ಅನುಮತಿ ಕೋರಬೇಕೆನ್ನುವ ಅಗತ್ಯ ಎಲ್ಲಿಯೂ ಇಲ್ಲ. ಅಂತಹ ಅನುಮತಿಯನ್ನು ಪಡೆಯುವುದು ದೂರುದಾರರ ಕರ್ತವ್ಯವಾಗಿದೆ” ಎಂದು ನ್ಯಾಯಾಲಯ ಹೇಳಿತ್ತು. ಹಾಗೂ ಸಿದ್ದರಾಮಯ್ಯ ಅವರ ಅರ್ಜಿಯನ್ನು ವಜಾಗೊಳಿಸಿತ್ತು.
ನಂತರ ವಿಶೇಷ ಸತ್ರ ನ್ಯಾಯಾಲಯವು ತನಿಖೆ ನಡೆಸಲು ಮೈಸೂರು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಅಲ್ಲದೇ, ಡಿಸೆಂಬರ್‌ 24ರ ಒಳಗೆ ತನಿಖಾ ವರದಿ ಸಲ್ಲಿಸಲು ನಿರ್ದೇಶಿಸಿತ್ತು. ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರು ಆರೋಪಿತ 14 ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದರು.

ಪ್ರಮುಖ ಸುದ್ದಿ :-   ಕಡೂರು| ದುಷ್ಕರ್ಮಿಗಳಿಂದ ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement