ವಕ್ಫ್ ಆಸ್ತಿ ವಿವಾದ | ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಯಾವುದೇ ರೈತರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸುವುದಿಲ್ಲ ಮತ್ತು ಅವರಿಗೆ ನೀಡಲಾದ ನೋಟಿಸ್ ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ವಿಜಯಪುರ, ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ಕೆಲವು ರೈತರಿಗೆ ಅವರ ಆಸ್ತಿ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, “ಯಾವುದೇ ರೈತರನ್ನು ಅವರ ಜಮೀನಿನಿಂದ ಹೊರಹಾಕುವುದಿಲ್ಲ. ಈ ಬಗ್ಗೆ ಸೋಮವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.
ಒಂದು ವೇಳೆ ರೈತರಿಗೆ ನೋಟಿಸ್ ಜಾರಿ ಮಾಡಿದ್ದರೆ ವಾಪಸ್ ಪಡೆಯಲಾಗುವುದು.‘ಕಂದಾಯ ಸಚಿವರಿಗೆ ಈ ಬಗ್ಗೆ ಪರಿಶೀಲಿಸುವಂತೆ ಹೇಳುತ್ತೇನೆ. ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದರು.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜಯಪುರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗುವುದು. ಅದರಲ್ಲಿ, ಸಹಾಯಕ ಆಯುಕ್ತರು, ಎಲ್ಲ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ವಕ್ಫ್ ಅಧಿಕಾರಿಗಳು ಇರುತ್ತಾರೆ ಎಂದು ತಿಳಿಸಿದ್ದಾರೆ. 1973-74ರಲ್ಲಿ ಅಧಿಸೂಚನೆಯಾಗುವ ಪೂರ್ವದಲ್ಲಿನ ದಾಖಲೆಗಳನ್ನು ರೈತರು ಸಲ್ಲಿಸಿದರೆ, ಅಂತಹ ಅಧಿಸೂಚಿತ ಜಾಗಗಳನ್ನು ಕೈ ಬಿಡಲು ಸರಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.

ಹೊನವಾಡದಲ್ಲಿ ವಕ್ಫ್ ಭೂಮಿ ಇರುವುದು 11 ಎಕರೆ ಮಾತ್ರ. ಈ ಬಗ್ಗೆ ವ್ಯವಸ್ಥಿತವಾಗಿ ಗೊಂದಲ ಮೂಡಿಸಿ, ಜನರ ನಡುವೆ ಸಂಘರ್ಷ ಉಂಟು ಮಾಡಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಇದು ಯತ್ನಾಳ ಹಾಗೂ ವಿಜಯೇಂದ್ರ ನಡುವಿನ ರಾಜಕೀಯ ಸಂಘರ್ಷದ ಪ್ರತಿಬಿಂಬ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೊನವಾಡ ಗ್ರಾಮದಲ್ಲಿ 1200 ಎಕರೆ ಜಮೀನನ್ನು ವಕ್ಫ್‌ಗೆ ಸೇರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. 1974ರಲ್ಲಿ ಮಹಲ್ ಬಗಾಯತ್ ಎಂಬ ಗ್ರಾಮದ ದಾಖಲೆಗಳಲ್ಲಿ ಬ್ರಾಕೆಟ್‍ನಲ್ಲಿ ಹೊನವಾಡ ಎಂದು ಸೇರಿಸಲಾಗಿತ್ತು. ಅದನ್ನು 1977ರಲ್ಲಿ ವಕ್ಫ್ ಬೋರ್ಡ್‍ನವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೊನವಾಡ ಎಂಬುದನ್ನು ತೆಗೆಸಿದ್ದಾರೆ. ಈ ಸಂಬಂಧ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ; ಸಿಎಂ ಡಿಕೆ ಶಿವಕುಮಾರ ಘೋಷಣೆ

2.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement