ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಯನ್ನು ಉಗ್ರಗಾಮಿಗಳು ಅಪಹರಿಸಿ ಹತ್ಯೆಗೈದಿದ್ದಾರೆ.
ಶ್ರೀನಗರದ ಭಾನುವಾರ ಮಾರುಕಟ್ಟೆಯೊಂದರಲ್ಲಿ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ 12 ಜನರು ಗಾಯಗೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.
ನಜೀರ್ ಅಹ್ಮದ್ ಮತ್ತು ಕುಲದೀಪಕುಮಾರ ಎಂಬವರನ್ನು ಗುರುವಾರ ಅಧ್ವಾರಿಯ ಮುಂಜ್ಲಾ ಧಾರ್ ಅರಣ್ಯದಿಂದ ಅಪಹರಿಸಿ ನಂತರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರನ್ನು ಬೇಟೆಯಾಡಲು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನನ್ನ ಸಹೋದರ ಮತ್ತು ಅಹ್ಮದ್ ಅವರನ್ನು ಭಯೋತ್ಪಾದಕರು ಅಪಹರಿಸಿ ಕೊಂದಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ಅವರು ಗ್ರಾಮ ರಕ್ಷಣಾ ಸಿಬ್ಬಂದಿ (ವಿಡಿಜಿ)ಯಾಗಿದ್ದರು ಮತ್ತು ಎಂದಿನಂತೆ ದನ ಮೇಯಿಸಲು ಹೋಗಿದ್ದರು” ಎಂದು ಕುಲದೀಪಕುಮಾರ ಅವರ ಸಹೋದರ ಪೃಥ್ವಿ ತಿಳಿಸಿದ್ದಾರೆ.
ಜೈಶ್-ಎ-ಮೊಹಮ್ಮದ್‌ನ ಒಂದು ಶಾಖೆಯಾದ ಕಾಶ್ಮೀರ ಟೈಗರ್ಸ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಕಣ್ಣು ಮುಚ್ಚಿದ ದೇಹಗಳ ಫೋಟೋಗಳನ್ನೂ ಅದು ಹಂಚಿಕೊಂಡಿದೆ.
ಹತ್ಯೆಯನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಖಂಡಿಸಿದ್ದಾರೆ.
ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಉತ್ತರ ಕಾಶ್ಮೀರದ ಸೋಪೋರ್‌ನಲ್ಲಿ ಗುರುವಾರ ಎನ್‌ಕೌಂಟರ್ ಕೂಡ ನಡೆಯಿತು. ಇಬ್ಬರಿಂದ ಮೂವರು ಉಗ್ರರು ಸಿಕ್ಕಿಬಿದ್ದಿರುವ ಶಂಕೆ ಇದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಶ್ರೀನಗರದಲ್ಲಿ ಸ್ಫೋಟದ ನಂತರ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ದಾಳಿಗಳ ಉಲ್ಬಣವನ್ನು ಶೀಘ್ರವಾಗಿ ಕೊನೆಗೊಳಿಸಲು “ಸಾಧ್ಯವಿರುವ ಎಲ್ಲವನ್ನೂ” ಮಾಡುವಂತೆ ಭದ್ರತಾ ಪಡೆಗಳಿಗೆ ಒತ್ತಾಯಿಸಿದ್ದಾರೆ.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಗುಂಡು ಹಾರಿಸಲಾಗಿತ್ತು. ಅದಕ್ಕೂ ಮೊದಲು ಹದಿನೈದು ದಿನಗಳೊಳಗೆ ವಲಸೆ ಕಾರ್ಮಿಕರ ಮೇಲೆ ಮೂರು ದಾಳಿಗಳು ನಡೆದಿದ್ದು, ಅಕ್ಟೋಬರ್ 20 ರಂದು ಗಂಡರ್‌ಬಾಲ್ ಜಿಲ್ಲೆಯ ಸುರಂಗ ನಿರ್ಮಾಣ ಸ್ಥಳದಲ್ಲಿ ಸ್ಥಳೀಯ ವೈದ್ಯರು ಮತ್ತು ಬಿಹಾರದ ಇಬ್ಬರು ಕಾರ್ಮಿಕರು ಸೇರಿದಂತೆ ಏಳು ಜನರನ್ನು ಭಯೋತ್ಪಾದಕರು ಕೊಂದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ