ಬೆಂಗಳೂರು : ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಖರ್ಚಿಗೆ ₹50 ಕೋಟಿ ರೂಪಾಯಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಆರೋಪಿತ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಮಾಡಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಜೆಡಿಎಸ್ ಮಾಜಿ ಮುಖಂಡ ವಿಜಯ ಟಾಟಾ ಅವರ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಎಚ್.ಡಿ. ಕುಮಾರಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರರ ಪರ ವಕೀಲ ಎ.ವಿ. ನಿಶಾಂತ ಅವರು “ಇದೇ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಜೆಡಿಎಸ್ ನಗರದ ಘಟಕದ ಅಧ್ಯಕ್ಷ ರಮೇಶ್ ಗೌಡ ವಿರುದ್ಧ ಯಾವುದೇ ಬಲವಂತ ಕ್ರಮಕೈಗೊಳ್ಳದಂತೆ ಆದೇಶ ಮಾಡಲಾಗಿದೆ” ಎಂದು ಪೀಠದ ಗಮನಕ್ಕೆ ತಂದರು.
ಪೀಠವು ಇದಕ್ಕೂ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಆದೇಶ ಅನ್ವಯಿಸಲಿದೆ ಎಂದು ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿತು.
ಅಕ್ಟೋಬರ್ 23ರಂದು ರಮೇಶ ಗೌಡ ಅರ್ಜಿ ವಿಚಾರಣೆ ನಡೆಸಿದ್ದ ಪೀಠವು “ಅಮೃತಹಳ್ಳಿ ಠಾಣಾಧಿಕಾರಿಯು ಕುಮಾರಸ್ವಾಮಿ ಅವರು 50 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಮೊದಲಿಗೆ ಎನ್‌ಸಿಆರ್ ದಾಖಲಿಸಿ, ಆನಂತರ ಎಫ್‌ಐಆರ್ ಮಾಡಿರುವುದು ಏಕೆ ಎಂಬುದಕ್ಕೆ ಮುಂದಿನ ವಿಚಾರಣೆ ವೇಳೆಗೆ ವಿವರಣೆ ಸಲ್ಲಿಸಬೇಕು.ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು” ಎಂದು ಆದೇಶಿಸಿತ್ತು.
ವಿಜಯ ಟಾಟಾ ದೂರು ಆಧರಿಸಿ ಅಕ್ಟೋಬರ್ 3ರಂದು ರಮೇಶ ಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 308(2), 351(2), 3(5) ಅಡಿ ಪ್ರಕರಣ ದಾಖಲಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ