ಪಕ್ಷದ ಕಚೇರಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಬಿಜೆಪಿ ನಾಯಕನ ಶವ ಪತ್ತೆ ; ಮಹಿಳೆಯ ಬಂಧನ

ಕೋಲ್ಕತ್ತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉಸ್ತಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕನ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಪೃಥ್ವಿರಾಜ್ ನಸ್ಕರ್ ಎಂದು ಗುರುತಿಸಲಾಗಿದೆ. ಈತ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 5ರಂದು ನಸ್ಕರ್ ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ದೂರು ದಾಖಲಿಸಿದ್ದರು. ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ ಪಕ್ಷದ ಕಚೇರಿಯಲ್ಲಿ ನಸ್ಕರ್ ಅವರ ರಕ್ತಸಿಕ್ತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಹತ್ಯೆಗೆ ವೈಯಕ್ತಿಕ ದ್ವೇಷ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನಸ್ಕರ್‌ ಅವರನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಿರುವುದಾಗಿ ಬಂಧಿತ ಮಹಿಳೆ ತಪ್ಪೊಪ್ಪಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಶವವನ್ನು ಪತ್ತೆಹಚ್ಚುವ ಮೊದಲು ಪೊಲೀಸ್ ತಂಡವು ಮುಂಭಾಗದ ಬಾಗಿಲು ಹಾಗೂ ಗೇಟನ್ನು ಮುರಿದು ಒಳಗೆ ಪ್ರವೇಶಿಸಬೇಕಾಯಿತು ಎಂದು ಅಧಿಕಾರಿ ಹೇಳಿದರು. ಹತ್ಯೆ ಮಾಡಿದವರು ಹಿಂಬಾಗಿಲ ಮೂಲಕ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ತನಿಖೆಯ ನಂತರ ಮತ್ತು ಮೊಬೈಲ್ ಫೋನ್‌ಗಳ ಟ್ರ್ಯಾಕಿಂಗ್ ನಂತರ, ಈ ಪ್ರಕರಣದ ಸಂಬಂಧ ಮಹಿಳೆಯನ್ನು ಹತ್ತಿರದ ಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಮತ್ತು ವಿಚಾರಣೆಯ ಸಮಯದಲ್ಲಿ, ಮಹಿಳೆ ತಾನು ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿ ಹೇಳಿದರು. ಆಕೆಗೆ ಬೇರೆ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಕಿರುತೆರೆ ನಟಿ-ನಿರೂಪಕಿಗೆ ಚಾಕುವಿನಿಂದ ಇರಿದ ಗಂಡ...

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement