ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಕಾರವಾರ ಶಾಸಕ ಸತೀಶ ಸೈಲ್‌ ಗೆ ಸದ್ಯಕ್ಕೆ ರಿಲೀಫ್‌ ನೀಡಿದ ಹೈಕೋರ್ಟ್

ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಹಾಗೂ ಇತರ ಆರೋಪಿಗಳಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ವಿಶೇಷ ಕೋರ್ಟ್ ವಿಧಿಸಿದ್ದ ಜೈಲು ಶಿಕ್ಷೆ ಪ್ರಶ್ನಿಸಿ ಸತೀಶ್ ಸೈಲ್ ಹಾಗೂ ಇತರ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ಆದೇಶಿಸಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಒಟ್ಟು ಆರು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಜನ ಪ್ರತಿನಿಧಿಗಳ ಕೋರ್ಟ್​ ನೀಡಿದ್ದ ಶಿಕ್ಷೆಯನ್ನು ಅಮಾನತು ಮಾಡಿದೆ.

6 ವಾರದಲ್ಲಿ ದಂಡದ ಮೊತ್ತದಲ್ಲಿ ಶೇ. 25 ಮೊತ್ತವನ್ನು ಠೇವಣಿ ಇಡಲು ಆರೋಪಿಗಳಿಗೆ ಸೂಚಿಸಲಾಗಿದೆ. ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದ ಆರೋಪಿ ಕಾಂಗ್ರೆಸ್ ಶಾಸಕ ಸತೀಶ ಸೈಲ್‌ಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಅ.26ರಂದು ಆದೇಶ ಹೊರಡಿಸಿತ್ತು. ಒಟ್ಟು 6 ಪ್ರಕರಣಗಳಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅಂದಿನ ಬಂದರು ಅಧಿಕಾರಿಯಾಗಿದ್ದ ಮಹೇಶ ಬಿಳಿಯೆ ಸೇರಿ 7 ಜನರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲಾಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಪ್ರಕರಣ ಹಿನ್ನೆಲೆ : 2010ರಲ್ಲಿ ಬೇಲೆಕೇರಿ ಬಂದರಿನಲ್ಲಿ ಸೀಜ್ ಆಗಿದ್ದಂತಹ 11,312 ಮೆಟ್ರಿಕ್ ಟನ್ ಮ್ಯಾಂಗನೀಸ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿತ್ತು. ಶಾಸಕ ಸತೀಶ್‌ ಸೈಲ್‌, ಅರಣ್ಯಾಧಿಕಾರಿ ಮಹೇಶ ಬಿಳಿಯೆ ಸೇರಿ ಹಲವರ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು.‌ ಪ್ರಕರಣದ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾದ-ಪ್ರತಿವಾದವನ್ನು ಆಲಿಸಿ, ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್‌ ಸೇರಿದಂತೆ 7 ಜನರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement