
ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾ ಮಾಡಿದೆ.
ಅರ್ಜಿಯ ಊರ್ಜಿತತ್ವಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಬುಧವಾರ ಪ್ರಕಟಿಸಿದೆ.
“ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಸೆಕ್ಷನ್ 35ಎ ಅಡಿ ವ್ಯಾಖ್ಯಾನ ಒಪ್ಪಲಾಗದು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೋರಿಕೆಗೆ ಅನುಮತಿಸಿದರೆ ಪ್ರತಿಯೊಂದು ಬ್ಯಾಂಕಿಂಗ್ ಸಂಸ್ಥೆಯು ತನಿಖೆಗೆ ಕೋರಬಹುದು. ಹೀಗೆ ಮಾಡಿದಲ್ಲಿ ದೆಹಲಿ ಪೊಲೀಸ್ ಸ್ಥಾಪನಾ ಕಾಯಿದೆಯು ಅನುಪಯುಕ್ತವಾಗಲಿದೆ” ಎಂದು ಪೀಠವು ಮೌಖಿಕವಾಗಿ ಹೇಳಿದೆ.

ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ವಿ ಆಚಾರ್ಯ ಅವರು “ಯಾವುದೇ ಪ್ರಕರಣದ ತನಿಖೆ ನಡೆಸುವ ಅಂತರ್ಗತ ಅಧಿಕಾರ ಸಿಬಿಐಗೆ ಇಲ್ಲ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲಾಗದು. ಪೊಲೀಸ್ ಅಧಿಕಾರವು ಶಾಸನಬದ್ಧವಾಗಿದ್ದು, ಅದು ಸಾಂವಿಧಾನಿಕ ನಿಬಂಧನೆಗಳಿಗೆ ಅನುಗುಣವಾಗಿದೆ. ಸಿಬಿಐ ಎಂದರೆ ಕೇಂದ್ರ ಸರ್ಕಾರವಾಗಿದ್ದು, ಅದು ಪ್ರಕರಣದಲ್ಲಿ ಪಕ್ಷಕಾರನಾಗಿಲ್ಲದಿದ್ದರೂ ನ್ಯಾಯಾಲಯದ ಮುಂದೆ ಬಂದಿದೆ ಎಂದು ವಾದಿಸಿದ್ದರು.
ಯೂನಿಯನ್ ಬ್ಯಾಂಕ್ ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಇಂಥ ಪ್ರಕರಣದಲ್ಲಿ ಸಿಬಿಐ ಒಂದೇ ತನಿಖಾ ಸಂಸ್ಥೆ ಎಂದು ಆರ್‌ಬಿಐ ಹೇಳಿದೆ. ಬ್ಯಾಂಕಿಂಗ್ ಕ್ಷೇತ್ರದ ನಿರ್ವಹಣೆಗೆ ವ್ಯವಸ್ಥಿತ ಆಪತ್ತು ಎದುರಾದಾಗ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಸೆಕ್ಷನ್ 35ಎ ಅನ್ವಯಿಸುತ್ತದೆ” ಎಂದು ವಾದಿಸಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ ಅವರು ಸಿಬಿಐ ತನಿಖೆಗೆ ಆಕ್ಷೇಪಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ