ಮಂಗಳೂರು : ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ ಯಾದವ್ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಜೊತೆ ದೇವಸ್ಥಾನಕ್ಕೆ ಮಂಗಳವಾರ ಆಗಮಿಸಿದ ಅವರು ಆಶ್ಲೇಷ ಬಲಿ ಪೂಜೆ, ಮಹಾಪೂಜೆ ಹಾಗೂ ಅಭಿಷೇಕ ನೆರವೇರಿಸುವ ಮೂಲಕ ಹರಕೆ ತೀರಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚೆ, ಶಲ್ಯ ಧರಿಸಿ ಬಂದ ಸೂರ್ಯಕುಮಾರ್ ಯಾದವ್ ದೇವರ ದರ್ಶನ ಪಡೆದರು. ದಂಪತಿ ದೇವರ ದರ್ಶನ ಪಡೆದು ಮಹಾಭಿಷೇಕ ಸೇವೆ ನೆರವೇರಿಸಿ ಬಳಿಕ ಪ್ರಸಾದ ಸ್ವೀಕರಿಸಿದರು. ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಸೂರ್ಯಕುಮಾರ್ ಯಾದವ್ ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಬಳಿಕ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ದೇವಸ್ಥಾನದಲ್ಲಿದ್ದ ನೂರಾರು ಮಂದಿ ಭಕ್ತರು ಸೂರ್ಯಕುಮಾರ ಯಾದವ್ ಅವರ ಫೋಟೊ ತೆಗೆದುಕೊಳ್ಳಲು ಮುಗಿಬಿದ್ದರು. ಧಾರ್ಮಿಕ ಕೆಲಸಗಳು ಮುಗಿದ ಬಳಿಕ ಸೂರ್ಯಕುಮಾರ ಯಾದವ್ ದಂಪತಿಯನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಸೂರ್ಯಕುಮಾರ ಯಾದವ್ ಪತ್ನಿ ದೇವಿಶಾ ಮಂಗಳೂರು ಮೂಲದವರು, ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ ಯಾದವ್ ಪತ್ನಿ ದೇವಿಶಾ ಜೊತೆ ಕಾಪು ಮಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು.
ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅರ್ಚಕರು ನೀವು ಮುಂದಿನ ಬಾರಿ ಬರುವ ವೇಳೆಗೆ ಭಾರತ ತಂಡದ ನಾಯಕರಾಗಿರುತ್ತೀರಾ ಎಂದು ಭವಿಷ್ಯ ನುಡಿದಿದ್ದರು. ಅದಾದ ಕೆಲವೇ ದಿನಗಳಲ್ಲಿ ಸೂರ್ಯಕುಮಾರ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.
ಸೂರ್ಯ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಕೆಲವೇ ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿದೆ ಈ ಸರಣಿ ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್ ಪತ್ನಿ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ