ಬೆಂಗಳೂರು: ನೀಟ್ ಕೋಚಿಂಗ್ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಗೆಪಾಟಲಿಗೀಡಾದ ಘಟನೆ ನಡೆದಿದೆ.
ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.
ವಿದ್ಯಾರ್ಥಿಗಳ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೋರ್ವ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಕನ್ನಡ ಸರಿಯಾಗಿ ಬರಲ್ಲ ಎಂದು ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ಸಚಿವ ಮಧು ಬಂಗಾರಪ್ಪ ಗರಂ ಆಗಿದ್ದಾರೆ. ವಿದ್ಯಾರ್ಥಿಯ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಮಧು ಬಂಗಾರಪ್ಪ ಕೋಪಗೊಂಡು ಕ್ರಮಕ್ಕೆ ಸೂಚಿಸಿದ್ದಾರೆ.
ವಿದ್ಯಾರ್ಥಿ ಹೇಳಿಕೆಯಿಂದ ಆರಂಭದಲ್ಲಿ ಗಲಿಬಿಲಿಗೊಂಡ ಮಧು ಬಂಗಾರಪ್ಪ, ನಂತರ ಕೋಪಗೊಂಡರು.
‘ಹೇ ಯಾರೋ ಅವನು ಹಾಗೆ ಮಾತಾಡೋನು? ನಾನು ಉರ್ದುವಿನಲ್ಲಾ ಮಾತನಾಡ್ತಾ ಇದೀನಾ?’ ಎಂದರು. ನಂತರ ‘ನಾನು ಸುಮ್ಮನಿರುವುದಕ್ಕೆ ಆಗುವುದಿಲ್ಲ. ಯಾರು ಕನ್ನಡ ಬರಲ್ಲ ಅಂತ ಯಾರು ಹಾಗೆ ಅಂದವರು. ಡೀಟೇಲ್ಸ್ ತೆಗೆದುಕೊಳ್ಳಿ. ಆತನ ವಿರುದ್ಧ ಕ್ರಮ ಕೈಗೊಳ್ಳಿ. ಏನು ಅಂತಾ ವಿಚಾರಿಸಿ ಕೇಳಿ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಅವರಿಗೆ ಸಚಿವ ಮಧು ಬಂಗಾರಪ್ಪ ಸೂಚನೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನೀಟ್, ಜೆಇಇ ಹಾಗೂ ಸಿಇಟಿ ತರಬೇತಿಗಾಗಿ ಉಚಿತ ಆನ್ಲೈನ್ ತರಬೇತಿ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬುಧವಾರ ಚಾಲನೆ ನೀಡಿದ್ದಾರೆ. ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ ರೂಪೇಶ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಇದ್ದರು.
ನಿಮ್ಮ ಕಾಮೆಂಟ್ ಬರೆಯಿರಿ