ಕರ್ನಾಟಕದ ಉಪಚುನಾವಣೆ : ಎಲ್ಲ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು, ಮತ್ತೆ ಸೋತ ನಿಖಿಲ ಕುಮಾರಸ್ವಾಮಿ

ಬೆಂಗಳೂರು : ಕರ್ನಾಟಕದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಎಲ್ಲ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಚನ್ನಪಟ್ಟಣದ ಜಿದ್ದಾಜಿದ್ದಿ ಕಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಅವರು ಜೆಡಿಎಸ್‌ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ ಕುಮಾರಸ್ವಾಮಿ ವಿರುದ್ಧ 25,515 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿದ್ದ ಯೋಗೇಶ್ವರಗೆ ಅನುಕಂಪ, ಕ್ಷೇತ್ರದಲ್ಲಿ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು, ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಹಾಗೂ ಡಿ.ಕೆ. ಸಹೋದರರು ಟೊಂಕ ಕಟ್ಟಿ ಬೆನ್ನಿಗೆ ನಿಂತಿರುವುದು ನೆರವಾಗಿದೆ. ಇದೇವೇಳೆ ಎರಡು ಸೋಲು ಕಂಡಿದ್ದ ಜೆಡಿಎಸ್​ನ ನಿಖಿಲ ಕುಮಾರಸ್ವಾಮಿ ಈ ಬಾರಿ ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಸೋಲುವ ಮೂಲಕ ಸತತ ಮೂರನೇ ಬಾರಿಗೆ ಸೋಲನುಭವಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆಯ ಕಣವಾಗಿದ್ದ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರ ಪುತ್ರ ಭರತ ಬೊಮ್ಮಾಯಿ ಅವರಿಗೆ ಸೋಲಾಗಿದೆ. ಕಾಂಗ್ರೆಸ್​ನ ಯಾಸಿರ್ ಅಹಮದ್​ ಖಾನ್​ ಪಠಾಣ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ನ ಯಾಸೀರ್​ ಪಠಾಣ್​ 13,448 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರಿಗೆ 1,00,587 ಮತಗಳು ದೊರೆತಿದ್ದರೆ, ಶಿಗ್ಗಾಂವಿ ಬಿಜೆಪಿ​ ಅಭ್ಯರ್ಥಿ ಭರತ್​ ಬೊಮ್ಮಾಯಿಗೆ 86,960 ಮತಗಳು ಬಂದಿವೆ.
ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು 9,645 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು 93,616 ಮತಗಳನ್ನು ಪಡೆದಿದ್ದರೆ ಬಿಜೆಪಿ ಅಭ್ಯರ್ಥಿ ಬಂಗಾರಿ ಹನುಮಂತು ಅವರು 83,967 ಮತಗಳನ್ನು ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement