
ನವದೆಹಲಿ: ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕುವಂತೆ ಕೋರಿದ್ದ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ 2 ನೇ ತಿದ್ದುಪಡಿಯ ಮೂಲಕ ಈ ಪದಗಳನ್ನು ಸಂವಿಧಾನ ಪೀಠಿಕೆಗೆ ಸೇರಿಸಲಾಗಿತ್ತು ಎಂದು ಅರ್ಜಿಗಳು ಆರೋಪಿಸಿದ್ದವು.
ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ಪೀಠಿಕೆಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯಕುಮಾರ ಅವರಿದ್ದ ಪೀಠ ಹೇಳಿದೆ. ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇದೆ. ಅದು ಪೀಠಿಕೆಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಭಾರತೀಯ ಸನ್ನಿವೇಶದಲ್ಲಿ ಸಮಾಜವಾದ ಮತ್ತು ಜಾತ್ಯತೀತತೆಯ ಅರ್ಥವೇನು ಮತ್ತು ಅದರ ಬಗ್ಗೆ ಸರ್ಕಾರ ಹೇಗೆ ನೀತಿ ನಿರೂಪಣೆ ಇರಬೇಕು ಎಂಬುದರ ಬಗ್ಗೆ ತಾನು ಗಮನಸೆಳೆದಿರುವುದಾಗಿ ಪೀಠ ಹೇಳಿದೆ.
ಮಾಜಿ ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ವಕೀಲ ಅಶ್ವಿನಿ ಉಪಾಧ್ಯಾಯ ಹಾಗೂ ಬಲರಾಮ್ ಸಿಂಗ್ ಎಂಬವರು ಅರ್ಜಿ ಸಲ್ಲಿಸಿದ್ದರು. ನವೆಂಬರ್ 22 ರಂದು ತೀರ್ಪು ಕಾಯ್ದಿರಿಸಿದ್ದ ಪೀಠ, ಜಾತ್ಯತೀತತೆ ಎಂಬುದು ಸಂವಿಧಾನದ ಮೂಲ ರಚನೆಯ ಭಾಗವಾಗಿದ್ದು 42ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೂ ಪರಿಶೀಲಿಸಿತ್ತು ಎಂದು ಹೇಳಿತ್ತು.



ನಿಮ್ಮ ಕಾಮೆಂಟ್ ಬರೆಯಿರಿ