ಸಿಬಿಐನಿಂದ ಮುಡಾ ಪ್ರಕರಣದ ತನಿಖೆ ಕೋರಿ ಅರ್ಜಿ : ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬದ ವಿರುದ್ಧದ ಆರೋಪ ಒಳಗೊಂಡ ಮುಡಾ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನಿಗಾವಣೆಯಲ್ಲಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಡಿಸೆಂಬರ್‌ 10ಕ್ಕೆ ಮುಂದೂಡಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ಇಂದು, ಮಂಗಳವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ ದವೆ ಅವರು “ತಾನು ಮುಡಾ ಪ್ರಕರಣದಲ್ಲಿ ಭೂಮಾಲೀಕರಾಗಿರುವ ಜೆ ದೇವರಾಜು ಅವರನ್ನು ಪ್ರತಿನಿಧಿಸುತ್ತಿದ್ದೇನೆ. ತಮ್ಮ ಪೀಠ ಮಾಡಿರುವ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಅದರ ವಿಚಾರಣೆಯು ಡಿಸೆಂಬರ್‌ 5ಕ್ಕೆ ನಿಗದಿಯಾಗಿದೆ.‌ ಮೇಲ್ಮನವಿ ಮುಂದೂಡಿಕೆಯಾಗಿರುವುದರಿಂದ ಈ ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದರು.

ಆಗ ಪೀಠವು “ಡಿಸೆಂಬರ್‌ 10ಕ್ಕೆ ಹಾಲಿ ಅರ್ಜಿ ವಿಚಾರಣೆ ನಡೆಸಲಾಗುವುದು” ಎಂದು ತಿಳಿಸಿತು.
ಮುಡಾ ಹಗರಣದ ತನಿಖಾ ಪ್ರಗತಿ ವರದಿಯನ್ನು ಇಂದು (ನ.26) ಸಲ್ಲಿಸುವಂತೆ ಹೈಕೋರ್ಟ್ ಲೋಕಾಯುಕ್ತರಿಗೆ ಸೂಚನೆ ನೀಡಿತ್ತು. ಈ ಆದೇಶವನ್ನೂ ಪ್ರಶ್ನಿಸಿ ಜಮೀನು ಮಾಲೀಕ ದೇವರಾಜು ಅರ್ಜಿ ಸಲ್ಲಿಸಿದ್ದಾರೆ. ಹಾಗೇ, ಹಗರಣ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್​ ಎತ್ತಿ ಹಿಡಿದಿತ್ತು. ಹೈಕೋರ್ಟ್ ಈ ತೀರ್ಪನ್ನೂ ಪ್ರಶ್ನಿಸಿ ದೇವರಾಜು ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿ ವಿಚಾರಣೆಯನ್ನು ಡಿಸೆಂಬರ್​ 5 ರಂದು ನಡೆಸುವುದಾಗಿ ಹೈಕೋರ್ಟ್ ವಿಭಾಗೀಯ ಪೀಠ​​ ಹೇಳಿದೆ.
ಪೀಠವು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್‌ 10ರ ಮಧ್ಯಾಹ್ನ 2:30ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement