ಕುಂದಾಪುರ | ಅಣೆಕಟ್ಟಿನ ಬಳಿ ಈಜಲು ಹೋಗಿ ಇಬ್ಬರು ನೀರುಪಾಲು

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ಗುಮ್ಮೋಲ ಸಮೀಪದ ಸೀತಾನದಿ ಒಳ್ಳೆಹೊಂಡ ಕಿಂಡಿ ಅಣೆಕಟ್ಟಿನ ಬಳಿ ಸ್ನಾನಕ್ಕೆ ಹೋದ ಇಬ್ಬರು ನೀರು ಪಾಲಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಗುಮ್ಮೋಲ ಹರ್ಗಗುಂಡಿಯ ಜಯಂತ್ ನಾಯ್ಕ (19 ) ಹಾಗೂ ಗೋಳಿಯಂಗಡಿಯ ಶ್ರೀಶ ಆಚಾರ್ಯ (14 ) ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನ ಸುಮಾರು 1 ಗಂಟೆ ಸಮಯಕ್ಕೆ ಗುಮ್ಮೋಲ ಸಮೀಪದ ಸೀತಾನದಿ ಒಳ್ಳೆಹೊಂಡ ಕಿಂಡಿ ಅಣೆಕಟ್ಟಿನ ಬಳಿ ಸ್ನಾನಕ್ಕೆ ನಾಲ್ವರು ಈಜಲು ತೆರಳಿದ್ದರು ಎನ್ನಲಾಗಿದೆ. ಶ್ರೀಶ ಆಚಾರ್ಯ ಕಲ್ಲಿನ ಮೇಲಿನಿಂದ ಕಾಲು ಜಾರಿ ನೀರಿಗೆ ಬಿದ್ದು ಮುಳುಗುವುದನ್ನು ಕಂಡ ಜಯಂತ ನಾಯ್ಕ ಆತನನ್ನು ರಕ್ಷಿಸಲು ನೀರಿಗೆ ಧುಮುಕಿದ್ದಾನೆ, ನಂತರ ನೀರಿನಿಂದ ಮೇಲೆ ಬರಲು ಆಗದೇ ಇಬ್ಬರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ಹೊಳೆಯ ದಡದಲ್ಲಿದ್ದ ಇಬ್ಬರು ಬಾಲಕರು ಓಡಿ ಹೋಗಿ ಸಮೀಪದ ಮನೆಯವರಿಗೆ ನಡೆದ ಘಟನೆ ಬಗ್ಗೆ ತಿಳಿಸಿದ ನಂತರ ಸ್ಥಳೀಯರು ತಕ್ಷಣವೇ ಘಟನಾ ಸ್ಥಳಕ್ಕೆ ಬಂದು ನೀರಿಗೆ ಧುಮುಕಿದ್ದಾರೆ. ನೀರಿನಲ್ಲಿ ಮುಳುಗಿದ ಇಬ್ಬರನ್ನು ಮೇಲೆತ್ತಿ ತಂದರೂ ಅಷ್ಟರಲ್ಲೇ ಇಬ್ಬರು ಕೊನೆಯುಸಿರು ಎಳೆದಿದ್ದಾರೆ ಎನ್ನಲಾಗಿದೆ. ಜಯಂತ ನಾಯ್ಕ ಗುಮ್ಮೋಲ ಯಕ್ಷಗಾನ ಕಲಾವಿದರಾಗಿದ್ದು ಈ ವರ್ಷ ಯಕ್ಷಗಾನ ಮೇಳಕ್ಕೆ ಹೋಗಿರಲಿಲ್ಲ ಎಂದು ತಿಳಿದುಬಂದಿದೆ. ಶ್ರೀಶ ಆಚಾರ್ಯ ಬೆಳ್ವೆ ಈತ ಹೆಬ್ರಿ (ಎಸ್‌ಆರ್‌ಎಸ್) ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವವನ್ನು ಹಸ್ತಾಂತರಿಸಲಾಗಿದೆ.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement