ಇಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಹಗರಣ : ಕೆಇಎ ಸಿಬ್ಬಂದಿ ಸೇರಿ 8 ಆರೋಪಿಗಳ ಬಂಧನ

ಬೆಂಗಳೂರು: ಎಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಹಗರಣಕ್ಕೆ (Engineering seat blocking) ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಬ್ಬಂದಿ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
2024-25ನೇ ಸಾಲಿಗಾಗಿ ವಿವಿಧ ಎಂಜಿನಿಯರಿಂಗ್ ಕೋರ್ಸ್ ಪ್ರವೇಶದ ವೇಳೆಯಲ್ಲಿ ಕೆಇಎ ಅಧಿಕಾರಿಯೊಬ್ಬರು ಸೀಟು ಬ್ಲಾಕಿಂಗ್ ಅನುಮಾನದ ಮೇಲೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ನವೆಂಬರ್ 13 ರಂದು ಈ ಹಗರಣ ಬೆಳಕಿಗೆ ಬಂದಿತ್ತು.
ತನಿಖೆಯ ಸಂದರ್ಭದಲ್ಲಿ ಮೂರು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತವನ್ನು ಪ್ರಶ್ನಿಸಲಾಗಿದೆ. ಹಗರಣ ಸಂಬಂಧ ಎಂಟು ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬರು ಕೆಇಎ ಸಿಬ್ಬಂದಿ ಇದ್ದಾರೆ. ಇತರರಲ್ಲಿ ಮಧ್ಯವರ್ತಿಗಳು ಮತ್ತು ಕೆಲವು ಎಂಜಿನಿಯರಿಂಗ್ ಕಾಲೇಜುಗಳ ಕೆಲವು ಸಿಬ್ಬಂದಿ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಕೆಇಎ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಂಚನೆ, ನಂಬಿಕೆ ದ್ರೋಹ, ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಸೀಟು ತೆಗೆದುಕೊಳ್ಳುವ ಉದ್ದೇಶಹೊಂದಿಲ್ಲದ ಕೆಲವು ಅಭ್ಯರ್ಥಿಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದ್ದು, ಅವರನ್ನು ಕಾಲೇಜು ಆಯ್ಕೆ ನಮೂದಿಸಲು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ನಾನಾ ಕಾರಣಗಳಿಂದ 2,625 ವಿದ್ಯಾರ್ಥಿಗಳು ಸೀಟ್ ರಿಜೆಕ್ಟ್ ಮಾಡಿದ್ದರು.
ಕೆಇಎ ನೌಕರನ ಸಹಾಯದಿಂದ ಪಡೆದ ಪಾಸ್‌ವರ್ಡ್‌ನಿಂದ ಸರ್ಕಾರಿ ಸೀಟ್ ಪಡೆದು ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟ್ ಬ್ಲಾಕ್ ಮಾಡಲಾಗುತ್ತಿತ್ತು. ಆ ಸೀಟ್‌ಗಳನ್ನು ಹೆಚ್ಚಿನ ಹಣಕ್ಕೆ ಮ್ಯಾನೇಜ್‌ಮೆಂಟ್ ಕೋಟಾದಡಿ ಬೇರೆಯವರಿಗೆ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement