ಬೆಂಗಳೂರು : ನಟ ಯಶ ಪ್ರಧಾನ ಭೂಮಿಕೆಯಲ್ಲಿರುವ ʼಟಾಕ್ಸಿಕ್ʼ ಸಿನಿಮಾದ ಶೂಟಿಂಗ್‌ಗಾಗಿ ಬೆಂಗಳೂರಿನ ಜಾಲಹಳ್ಳಿಯ ಎಚ್‌ಎಂಟಿ ಮೀಸಲು ಅರಣ್ಯದಲ್ಲಿ ಮರಗಳ ಹನನ ಮಾಡಲಾಗಿದೆ ಎಂದು ಆರೋಪಿಸಿ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಲ್‌ಎಲ್‌ಪಿ ವಿರುದ್ಧದ ತನಿಖೆಗೆ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿನ ನ್ಯಾಯಾಂಗ ಪ್ರಕ್ರಿಯೆಗೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಕೆವಿಎನ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಲ್‌ಎಲ್‌ಪಿ ಸಂಸ್ಥೆಯು ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ನಂತರದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಅರ್ಜಿದಾರನ್ನು ಪ್ರತಿನಿಧಿಸಿದ್ದ ವಕೀಲ ಬಿಪಿನ್ ಹೆಗ್ಡೆ, “ಮೈಸೂರು ಸರ್ಕಾರವು 1963ರಲ್ಲಿ 443 ಎಕರೆ ಭೂಮಿಯನ್ನು ಜಾರಕಬಂಡೆ ಕಾವಲ್ ಮತ್ತು ಪೀಣ್ಯಾ ಪ್ಲಾಂಟೇಶನ್‌ನಲ್ಲಿ ಹಿಂದೂಸ್ತಾನ್ ಮೆಷೀನ್ಸ್ ಟೂಲ್ಸ್‌ಗೆ (ಎಚ್‌ಎಂಟಿ) ನೀಡಿತ್ತು. ಇದರಲ್ಲಿ ಎಚ್‌ಎಂಟಿಯು 18.2 ಎಕರೆ ಜಾಗವನ್ನು ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿತ್ತು. ಈ ಜಾಗವನ್ನು ಕೆವಿಎನ್ ಸಂಸ್ಥೆಯು ಭೋಗ್ಯಕ್ಕೆ ಪಡೆದು ತಾತ್ಕಾಲಿಕವಾಗಿ ಟಾಕ್ಸಿಕ್ ಸಿನಿಮಾ ಶೂಟಿಂಗ್‌ಗೆ ಸೆಟ್ ಹಾಕಿದೆ. ಇದು ಮೀಸಲು ಅರಣ್ಯ ಎಂದು ಎಫ್‌ಐಆರ್ ಹಾಕಲಾಗಿದೆ. ಸರ್ಕಾರ ಈಗ ಜಾಲಹಳ್ಳಿ ಅರಣ್ಯವಲ್ಲ ಎಂದು ಹೇಳುತ್ತಿದೆ. ಅಲ್ಲಿ 20ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್, ಆಸ್ಪತ್ರೆ ನಿರ್ಮಾಣವಾಗಿವೆ” ಎಂದು ವಾದಿಸಿದರು.
ರಾಜ್ಯದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ, “ಅಲ್ಲಿದ್ದ ಗಿಡ ಮರಗಳನ್ನು ಕಡಿದು ಹಾಕಲಾಗಿದೆ” ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಕೆವಿಎನ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಲ್‌ಎಲ್‌ಪಿ ವಿರುದ್ಧ ಕರ್ನಾಟಕ ಅರಣ್ಯ ಕಾಯಿದೆ ಸೆಕ್ಷನ್ 24(ಜಿ) ಅಡಿ ದಾಖಲಿಸಿರುವ ಎಫ್‌ಐಆರ್ ಸಂಬಂಧದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.
ನಿಮ್ಮ ಕಾಮೆಂಟ್ ಬರೆಯಿರಿ