4 ಲಕ್ಷ ರೂ. ಲಂಚ ಪಡೆದ ಆರೋಪ ; ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ

ಮಂಗಳೂರು : ಆಸ್ತಿಯೊಂದರ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು 4 ಲಕ್ಷ ರೂ.ಗಳ ಲಂಚ ಪಡೆದ ಆರೋಪದ ಮೇಲೆ ಕಂದಾಯ ನಿರೀಕ್ಷಕ ಜಿ.ಎಸ್.ದಿನೇಶ ಅವರನ್ನು ಗುರುವಾರ (ಡಿ.19) ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬರು ಮೃತಪಟ್ಟ ಅಜ್ಜಿಯ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರ ಹೆಸರನ್ನು ಸೇರಿಸಲು ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯು ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್ ದಿನೇಶ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದೇ ಅರ್ಜಿಯನ್ನು ಬಾಕಿ ಇರಿಸಿಕೊಂಡಿದ್ದರು. ಈ ಬಗ್ಗೆ ಅರ್ಜಿದಾರರು ಡಿಸೆಂಬರ್‌ 9ರಂದು ಕಂದಾಯ ನಿರೀಕ್ಷಕರ ಕಚೇರಿಗೆ ಹೋಗಿ ಅರ್ಜಿಯ ವಿಚಾರಿಸಿದ್ದರು. ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್ ದಿನೇಶ ಆಸ್ತಿಗೆ ಸಂಬಂಧಿಸಿದ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡಲು 4 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ನಂತರ ಅರ್ಜಿದಾರರು ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಂದು, ಗುರುವಾರ (ಡಿಸೆಂಬರ್‌ 19) ಬೆಳಿಗ್ಗೆ ಮುಲ್ಕಿಯ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ ದೂರುದಾರರಿಂದ 4 ಲಕ್ಷ ರೂ. ಲಂಚ ಸ್ವೀಕರಿಸುವಾಗ ಸುರತ್ಕಲ್ ಜಂಕ್ಷನ್ ಬಳಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಧಿಕಾರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ ನಟರಾಜ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ.ಎ., ಸುರೇಶಕುಮಾರ ಪಿ, ಚಂದ್ರಶೇಖರ ಕೆ.ಎನ್ ಅವರು ಸಿಬ್ಬಂದಿ ಜೊತೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಕಾಲ್ತುಳಿತ ಪ್ರಕರಣ | ಐಪಿಎಸ್‌ ಅಧಿಕಾರಿ ವಿಕಾಸಕುಮಾರ ಅಮಾನತು ಆದೇಶ ರದ್ದುಗೊಳಿಸಿದ ಸಿಎಟಿ; ಸರ್ಕಾರಕ್ಕೆ ಹಿನ್ನಡೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement