ನವದೆಹಲಿ: ಸೋಮವಾರ ರಾಜಕೀಯ ವಿವಾದ ಎಬ್ಬಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ದೇಶವು ಶೋಕಿಸುತ್ತಿರುವಾಗ, ರಾಹುಲ್ ಗಾಂಧಿ ಹೊಸ ವರ್ಷವನ್ನು ಆಚರಿಸಲು ವಿಯೆಟ್ನಾಂಗೆ ಹಾರಿದ್ದಾರೆ” ಎಂದು ಆರೋಪಿಸಿದ್ದಾರೆ.
ಮಾಜಿ ಪ್ರಧಾನಿಯವರ ಸಾವನ್ನು ರಾಹುಲ್ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಾಳವೀಯ, “ಗಾಂಧಿಗಳು ಮತ್ತು ಕಾಂಗ್ರೆಸ್ ಸಿಖ್ಖರನ್ನು ದ್ವೇಷಿಸುತ್ತವೆ. ಇಂದಿರಾ ಗಾಂಧಿಯವರು ದರ್ಬಾರ್ ಸಾಹಿಬ್ ಅನ್ನು ಅಪವಿತ್ರಗೊಳಿಸಿದ್ದರು ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಹೇಳಿದ್ದಾರೆ.
ʼಮನಮೋಹನ್ ಸಿಂಗ್ ಅವರ ನಿಧನಕ್ಕೆ ದೇಶ ಶೋಕಾಚರಣೆ ನಡೆಸುತ್ತಿರುವಾಗ, ಹೊಸ ವರ್ಷಾಚರಣೆಗೆ ರಾಹುಲ್ ಗಾಂಧಿ ವಿಯೆಟ್ನಾಂಗೆ ಹೊರಟಿದ್ದಾರೆ. ಡಾ. ಸಿಂಗ್ ಅವರ ಸಾವನ್ನು ರಾಹುಲ್ ಗಾಂಧಿ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಸಿಂಗ್ ಬಗ್ಗೆ ಅವರಿಗಿರುವ ತಿರಸ್ಕಾರದ ಪ್ರತೀಕʼʼ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ಎಕ್ಸ್ ಪೋಸ್ಟ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಅವರು ಕೂಡ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದು,”ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಇಡೀ ದೇಶ ಶೋಕದಲ್ಲಿದೆ. ದೇಶದಲ್ಲಿ 7 ದಿನಗಳ ಶೋಕಾಚರಣೆ ಇದ್ದಾಗಲೂ ಹೊಸ ವರ್ಷ ಆಚರಣೆಗೆ ರಾಹುಲ್ ಗಾಂಧಿ ವಿದೇಶಕ್ಕೆ ಹಾರುತ್ತಿದ್ದಾರೆ. ಕಾಂಗ್ರೆಸ್ನ ಯಾರೊಬ್ಬರೂ ಮನಮೋಹನ್ ಸಿಂಗ್ ಚಿತಾಭಸ್ಮವನ್ನು ಸಂಗ್ರಹಿಸಲು ಹೋಗಲಿಲ್ಲ. ಇದು ಅವರ ನಿಜವಾದ ಮುಖ” ಎಂದು ಹೇಳಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮಣಿಕಂ ಟಾಗೋರ್, ʼʼತಿರುಚುವ ರಾಜಕೀಯವನ್ನು ಸಂಘಿಗಳು ಯಾವಾಗ ನಿಲ್ಲಿಸುತ್ತಾರೆ?ʼ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ʼʼಯುಮುನಾ ನದಿ ದಡದಲ್ಲಿ ಡಾ. ಸಿಂಗ್ ಅವರ ಅಂತ್ಯಸಂಸ್ಕಾರ ಮಾಡುವುದಕ್ಕೆ ಪ್ರಧಾನಿ ಮೋದಿ ನಿರಾಕರಿಸಿದರು. ಅಷ್ಟೇ ಅಲ್ಲದೆ, ಸಚಿವರು ಸಿಂಗ್ ಕುಟುಂಬವನ್ನು ನಾಚಿಕೆಯಿಲ್ಲದೆ ಮೂಲೆಗುಂಪು ಮಾಡಿದರು. ರಾಹುಲ್ ಗಾಂಧಿ ಖಾಸಗಿಯಾಗಿ ಪ್ರಯಾಣಿಸಿದರೆ ನಿಮಗೇನು ಸಮಸ್ಯೆ? ಹೊಸ ವರ್ಷದಲ್ಲಾದರೂ ಸರಿಯಾಗಿ’ʼ ಎಂದು ತಿರುಗೇಟು ನೀಡಿದ್ದಾರೆ.
ಶನಿವಾರ ದೆಹಲಿಯ ಯಮುನಾ ನದಿಯಲ್ಲಿ ಲೀನವಾದ ಮನಮೋಹನ್ ಸಿಂಗ್ ಅವರ ಅಸ್ಥಿಯನ್ನು ಸಂಗ್ರಹಿಸಲು ಅವರು ಬರಲಿಲ್ಲ ಎಂದು ಬಿಜೆಪಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಆರೋಪಿಸಿದ ಒಂದು ದಿನದ ನಂತರ ಈ ಹೇಳಿಕೆ ಬಂದಿದೆ.
ಮನಮೋಹನ ಸಿಂಗ್ ಅವರ ಸ್ಮಾರಕಕ್ಕಾಗಿ ಗೊತ್ತುಪಡಿಸಿದ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂಬ ಅವರ ಬೇಡಿಕೆಯ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಡಾ ಸಿಂಗ್ ಅವರನ್ನು ಕೇಂದ್ರ ಸರ್ಕಾರ “ಅವಮಾನಿಸುತ್ತಿದೆ” ಎಂದು ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದರೆ, ಕಾಂಗ್ರೆಸ್ ಪಕ್ಷವು “ಅಗ್ಗದ ರಾಜಕೀಯ” ದಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ