ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ವಿರುದ್ಧದ ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಹೈಕೋರ್ಟ್ ನಡೆಸಿದ್ದು ತೀರ್ಪನ್ನು ಕಾಯ್ದಿರಿಸಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪ ಅವರ ಖುದ್ದು ಹಾಜರಿಗೆ ನೀಡಿದ್ದ ವಿನಾಯಿತಿಯನ್ನು ವಿಸ್ತರಿಸಿದೆ.ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಬಿಎಸ್ವೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ಬಿಎಸ್ವೈ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ತನ್ನ ಪುತ್ರಿಯೊಂದಿಗೆ (ಸಂತ್ರಸ್ತೆ) ಬಂದಿದ್ದ ದೂರುದಾರೆ (ಸಂತ್ರಸ್ತೆಯ ತಾಯಿ)ಯ ಅಹವಾಲು ಕೇಳಿದ ನಂತರ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕರೆ ಮಾಡಿ, ಕ್ರಮಕೈಗೊಳ್ಳುವಂತೆ ಯಡಿಯೂರಪ್ಪ ಸೂಚಿಸಿದ್ದರು. ಒಂದೊಮ್ಮೆ ಸಂತ್ರಸ್ತೆಗೆ ಕಿರುಕುಳ ನೀಡಿದ್ದರೆ ಪೊಲೀಸ್ ಆಯುಕ್ತರ ಬಳಿಗೆ ತೆರಳಿದ್ದಾಗ ಅವರು ಈ ವಿಚಾರವನ್ನು ಏಕೆ ತಿಳಿಸಲಿಲ್ಲ? ಇದು ಅನುಮಾನ ತರುತ್ತದೆ” ಎಂದರು.
ಪ್ರಾಸಿಕ್ಯೂಷನ್ ಪರ ರವಿವರ್ಮಕುಮಾರ ವಾದ ಮಂಡಿಸಿದ್ದು ಯಡಿಯುರಪ್ಪ ಅವರ ಮನೆಯ ಎಂಟ್ರಿ ರಿಜಿಸ್ಟರ್ ಅನ್ನು ತಿರುಚಲಾಗಿದೆ ಎಂದು ಆರೋಪಿಸಿದರು. ಆರೋಪಿಗಳು ಪಿರ್ಯಾದಿ ಫೇಸ್ಬುಕ್ನಿಂದ ವೀಡಿಯೊವನ್ನು ಡಿಲೀಟ್ ಮಾಡಿಸಿದ್ದಾರೆ ಎಂದು ವಾದಿಸಿದರು.
ಯಡಿಯೂರಪ್ಪನವರು 2024ರ ಫೆಬ್ರವರಿಯಲ್ಲಿ ಅವರ ನಿವಾಸದಲ್ಲಿ 17 ವರ್ಷದ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ ಬಳಿಕ ಈ ಪ್ರಕರಣ ದಾಖಲಾಗಿತ್ತು. 2024ರ ಮಾರ್ಚ್ 14ರಂದು ಸದಾಶಿವನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಿಸಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು, ತನಿಖೆ ನಡೆಸಿದ ಸಿಐಡಿ ಆರೋಪಪಟ್ಟಿ ಸಲ್ಲಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ