ಬೆಂಗಳೂರು | ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅನಾಹುತ ; ಇಬ್ಬರು ಕಾರ್ಮಿಕರು ಸಜೀವ ದಹನ

ಬೆಂಗಳೂರು: ಬೆಂಗಳೂರಿನ ಉತ್ತರ ತಾಲೂಕಿನ ಸೀಗೆಹಳ್ಳಿಯಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಅನಾಹುತದಲ್ಲಿ ಇಬ್ಬರು ಸಜೀವವಾಗಿ ದಹನವಾಗಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಮೃತರನ್ನು ಉತ್ತರ ಪ್ರದೇಶ ಮೂಲದ ಉದಯ್ ಭಾನು(40) ಮತ್ತು ಬಿಹಾರ ಮೂಲದ ರೋಷನ್(23) ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಪೇಂಟರ್, ಮತ್ತೊಬ್ಬರು ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಕಡಬಗೆರೆ ಕ್ರಾಸ್‍ನಲ್ಲಿ ಸತೀಶ ಎಂಬವರು ನಾಲ್ಕು ಅಂತಸ್ತಿನ ಮನೆ ನಿರ್ಮಾಣ ಮಾಡುತ್ತಿದ್ದು, ಕೆಲ ಕಾರ್ಮಿಕರು ಈ ಕಟ್ಟಡದಲ್ಲೇ ಅಡುಗೆ ಮಾಡಿಕೊಂಡು ಅಲ್ಲೇ ವಾಸವಿದ್ದರು ಎಂದು ತಿಳಿದುಬಂದಿದೆ.

ಇಂದು, ಗುರುವಾರ ಮಧ್ಯಾಹ್ನ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಕ್ಕಪಕ್ಕದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ನಾಲ್ಕು ಅಗ್ನಿಶಾಮಕ ವಾಹನಗಳೊಂದಿಗೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರಾದರೂ ಅಷ್ಟರಲ್ಲಾಗಲೇ ಇಬ್ಬರು ಕಾರ್ಮಿಕರು ಬೆಂಕಿಯಿಂದ ಗಂಭಿರವಾದ ಸುಟ್ಟಗಾಯಗಳಿಂದ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಡುಗೆಗೆ ಬಳಸುವ ಸಿಲಿಂಡರ್‍ ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಅಗ್ನಿ ಅವಘಡ ಸಂಭವಿಸಿರಬಹುದೇ ಅಥವಾ ವೆಲ್ಡಿಂಗ್ ಮಾಡುವಾಗ ಬೆಂಕಿ ಕಿಡಿಯಿಂದ ಈ ಅನಾಹುತ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಒಪ್ಪಿಗೆಯಿಲ್ಲದೆ ಖಾಸಗಿ ವೀಡಿಯೊ-ಫೋಟೊ ಶೇರ್ ಮಾಡಿದ್ರೆ ಎಫ್‌ಐಆರ್ : ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement