ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳದ ಎಲ್‌ಡಿಎಫ್ ಸರ್ಕಾರವನ್ನು ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿಗಳ ನಡುವೆ, ಶಶಿ ತರೂರ್ ತಾವು ಪಕ್ಷಕ್ಕೆ ಲಭ್ಯವಿರುವುದಾಗಿ ಹೇಳಿದ್ದಾರೆ, ಆದರೆ ಪಕ್ಷಕ್ಕೆ ತಮ್ಮ ಸೇವೆಯ ಅಗತ್ಯವಿಲ್ಲದಿದ್ದರೆ ತನಗೆ “ಆಯ್ಕೆಗಳು” ಸಹ ಇವೆ ಎಂದು ಎಚ್ಚರಿಸಿದ್ದಾರೆ.
ಆದರೆ, ಪಕ್ಷ ಬದಲಾಯಿಸುವ ಮಾತನ್ನು ತಳ್ಳಿ ಹಾಕಿರುವ ತರೂರ್, ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದಿಂದ ಜಿಗಿಯುವುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಮಲಯಾಳಂ ಪಾಡ್‌ಕಾಸ್ಟ್‌ನಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೇರಳ ಸರ್ಕಾರದ ನೀತಿಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ ನಂತರ ಶಶಿ ತರೂರ್ ಹೊಗಳಿದ್ದರು. ಇದು ಕಾಂಗ್ರೆಸ್ ಪಕ್ಷಕ್ಕೆ ಸರಿ ಬರಲಿಲ್ಲ.
ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ತರೂರ್, ಅವರು ತಮ್ಮನ್ನು ರಾಜಕಾರಣಿ ಎಂದು ಭಾವಿಸುವುದಿಲ್ಲ ಎಂದು ಹೇಳಿದರು. ಹೊಸ ಮತದಾರರನ್ನು ಆಕರ್ಷಿಸಲು ಕೇರಳದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ವಿಸ್ತರಿಸಬೇಕಾಗಿದೆ ಮತ್ತು ಪಕ್ಷದ ಕೇರಳ ರಾಜ್ಯ ಘಟಕದಲ್ಲಿ ನಾಯಕರ ಕೊರತೆಯಿದೆ ಎಂದು ಹೇಳಿದ್ದಾರೆ.
ಪಕ್ಷದ ಕೇರಳ ಘಟಕಕ್ಕೆ ಸ್ಪಷ್ಟ ನಾಯಕನ ಕೊರತೆಯಿದೆ ಎಂಬ ಅವರ ಅಭಿಪ್ರಾಯವನ್ನು ಹಲವಾರು ಕಾಂಗ್ರೆಸ್ ಸದಸ್ಯರು ಬೆಂಬಲಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ತಿರುವನಂತಪುರಂನಿಂದ ನಾಲ್ಕು ಬಾರಿ ಸಂಸದರಾಗಿರುವ ತರೂರ್, ಕಾಂಗ್ರೆಸ್ ತನ್ನ ಮನವಿಯನ್ನು ಗಂಭೀರವಾಗಿ ತೆಗೆದುಕೊಳ್ಳಲು ವಿಫಲವಾದರೆ, ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿ ಸತತ ಮೂರನೇ ಅವಧಿಗೆ ವಿಪಕ್ಷದಲ್ಲೇ ಉಳಿಯಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ