ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರಿಗೆ ತನಿಖೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಜಾರಿ ಮಾಡಿದ್ದ ಸಮನ್ಸ್/ನೋಟಿಸ್ ಹಾಗೂ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರು ಮತ್ತು ತನಿಖೆ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಸೆಕ್ಷನ್ 50ರ ಅಡಿ ಜಾರಿ ಮಾಡಿರುವ ಸಮನ್ಸ್ ಪ್ರಶ್ನಿಸಿ ಪ್ರತ್ಯೇಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ಈ ಹಿಂದೆ ವಿಚಾರಣೆ ವೇಳೆ ಬೈರತಿ ಸುರೇಶ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ “ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 14 ನಿವೇಶನ ಹಂಚಿಕೆ ಪ್ರಕರಣದಲ್ಲಿ ಯಾವುದೇ ಅಪರಾಧ ಅಥವಾ ಅಪರಾಧ ಪ್ರಕ್ರಿಯೆ ಇಲ್ಲ. ಯಾವುದೇ ಪ್ರೆಡಿಕೇಟ್ ಅಪರಾಧದಲ್ಲಿ (ಅಕ್ರಮ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಸುರೇಶ ಭಾಗಿಯಾಗಿಲ್ಲ. 2023ರ ಜೂನ್‌ನಲ್ಲಿ ಸುರೇಶ ನಗರಾಭಿವೃದ್ಧಿ ಮಂತ್ರಿಯಾಗಿದ್ದಾರೆ. ಅಕ್ರಮ ನಿವೇಶನಗಳಿಗೆ ಸಂಬಂಧಿಸಿದ ಇದು ಅಪರಾಧ ಪ್ರಕ್ರಿಯೆಯಾಗಿದ್ದು, ಯಾವ ರೀತಿಯಲ್ಲಿಯೂ ಸುರೇಶ ಇದಕ್ಕೆ ಸಂಬಂಧಿಸಿಲ್ಲ. ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶಗೆ ಇ ಡಿ ಜಾರಿ ಮಾಡಿದ್ದ ಸಮನ್ಸ್ ಅನ್ನು ಸಮನ್ವಯ ಪೀಠವು ವಜಾ ಮಾಡಿದೆ” ಎಂದು ವಾದಿಸಿದ್ದರು.
ಪಾರ್ವತಿ ಅವರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಂದೇಶ ಚೌಟ ಅವರು “ಪಾರ್ವತಿ ಅವರು ಮುಡಾಗೆ ಆಕ್ಷೇಪಾರ್ಹವಾದ 14 ನಿವೇಶನಗಳನ್ನು 2024ರ ಅಕ್ಟೋಬರ್ 10ರಂದು ಮರಳಿಸದ ದಿನವೇ ಜಾರಿ ನಿರ್ದೇಶನಾಲಯವು ಇಸಿಐಆರ್ ದಾಖಲಿಸಿದೆ. ಅಪರಾಧ ಪ್ರಕ್ರಿಯೆ ಇಲ್ಲದಿರುವಾಗ ಯಾವ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುತ್ತದೆ? ಪಿಎಂಎಲ್‌ಎ ಅನ್ವಯಿಸಲು ಹಣ ವರ್ಗಾವಣೆಯಾಗಿರಬೇಕು. ಇಲ್ಲಿ ಎಲ್ಲಿ ಹಣ ವರ್ಗಾವಣೆಯಾಗಿದೆ? ಲೋಕಾಯುಕ್ತ ಎಫ್‌ಐಆರ್ ದಾಖಲಿಸಿದ ಬೆನ್ನಿಗೇ ಆತುರದಲ್ಲಿ ಇ ಡಿ ಪ್ರಕರಣ ದಾಖಲಿಸಿದೆ. ಇಲ್ಲಿ ಪ್ರಕರಣ ದಾಖಲಿಸಲು ಇ ಡಿಗೆ ವ್ಯಾಪ್ತಿಯೇ ಇಲ್ಲ” ಎಂದು ವಾದಿಸಿದ್ದರು.
ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ ಕಾಮತ್ ಅವರು “ನಿಯಮಗಳನ್ನು ಉಲ್ಲಂಘಿಸಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಿದೆ ಎಂದು ದೂರು ಬಂದಿದೆ. ಹೀಗಾಗಿ, 14 ನಿವೇಶನಗಳಿಗೆ ಸೀಮಿತವಾಗಿ ತನಿಖೆ ನಡೆಸುತ್ತಿಲ್ಲ. ಪ್ರೆಡಿಕೇಟ್ ಅಪರಾಧ ದಾಖಲಾದ ಬಳಿಕ ಅಪರಾಧ ಪ್ರಕರಣ ದಾಖಲಿಸಿ ತನಿಖೆ ನಡೆಸದಂತೆ ಯಾವುದೇ ನಿರ್ಬಂಧವಿಲ್ಲ. ಮುಡಾ ತನಿಖೆಯಲ್ಲಿ ಸಾಕಷ್ಟು ಹುಳುಕುಗಳಿವೆ.
“ಸಂಬಂಧಿಗಳ ಹೆಸರಿನಲ್ಲಿ ಹಲವಾರು ಮಂದಿ ನಿವೇಶನಗಳನ್ನು ಖರೀದಿಸಿದ್ದಾರೆ. ಪಾರ್ವತಿ ಅವರಿಗೆ ಹಂಚಿಕೆಯಾಗಿದ್ದ 14 ನಿವೇಶನಗಳು ಹಗರಣದ ಒಂದು ಭಾಗವಷ್ಟೆ. ಹೀಗಾಗಿ, ಅವರ ಸಂಬಂಧಿಗಳಿಂದ ಮಾಹಿತಿ ಸಂಗ್ರಹಿಸಲು ಅನುಮತಿಸಬೇಕು ಎಂದು ಕೋರಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಇಡಿ ಸಮನ್ಸ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ