ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಈಗ ಸಿಬಿಐ ಪ್ರಕರಣ ದಾಖಲಿಸಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಪ್ರತ್ಯೇಕವಾಗಿ ತನಿಖೆ ಆರಂಭಿಸಿದೆ.ಚಿನ್ನ ಕಳ್ಳ ಸಾಗಣೆಯ ಸಿಂಡಿಕೇಟ್ ಪತ್ತೆಗೆ ಮುಂದಾಗಿರುವ ಸಿಬಿಐ ದೆಹಲಿ, ಮುಂಬೈ, ಬೆಂಗಳೂರಿನಲ್ಲಿ ತನಿಖೆ ಪ್ರಾರಂಭಿಸಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ.
ಮಾರ್ಚ್ 3ರಂದು ರಾತ್ರಿ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಚಲನಚಿತ್ರ ನಟಿ ರನ್ಯಾ ರಾವ್ ಅವಳನ್ನು ಡಿಆರ್‌ಇ ಅಧಿಕಾರಿಗಳು ಬಂಧಿಸಿದ್ದರು.
ತಪಾಸಣೆಗೆ ಒಳಪಡಿಸಿದಾಗ ರನ್ಯಾ ಧರಿಸಿದ್ದ ಲೆದರ್ ಜಾಕೆಟ್ ಮತ್ತು ತನ್ನ ಹೊಟ್ಟೆ, ಕಾಲು ಸೇರಿದಂತೆ ವಿವಿಧ ಭಾಗಗಳಲ್ಲಿ ಬ್ಯಾಂಡೇಜ್ ಬಟ್ಟೆಯಿಂದ ಸುತ್ತಿಕೊಂಡಿದ್ದ ₹12 ಕೋಟಿ ಮೌಲ್ಯದ 14.8 ಕೇಜಿ ತೂಕದ ಚಿನ್ನದ ಬಿಸ್ಕೆಟ್ ಹಾಗೂ ಗಟ್ಟಿಗಳು ಪತ್ತೆಯಾಗಿದ್ದವು. ಇದರ ಜೊತೆಗೆ ರನ್ಯಾ ನಿವಾಸದಲ್ಲೂ ಇಡಿ ದಾಳಿ ಮಾಡಿ 2.30 ಕೋಟಿ ನಗದು ಹಣ ವಶಪಡಿಸಿಕೊಂಡಿತ್ತು.
ರನ್ಯಾ ಅಮೆರಿಕ, ಬ್ರಿಟನ್, ಯುಎಇಗೆ ಹಲವು ಬಾರಿ ಭೇಟಿ ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಇದರಲ್ಲಿ ದೊಡ್ಡವರ ಕೈವಾಡ ಇರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ