48 ನಾಯಕರ ಹನಿಟ್ರ್ಯಾಪ್ ಸಿಡಿ ಇದೆ, ನನ್ನ ಮೇಲೂ ಯತ್ನ; ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಮಾಹಿತಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್‌ (Honey Trap) ಮತ್ತೆ ಸದ್ದು ಮಾಡುತ್ತಿದೆ. ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ ತಯಾರಾಗಿದೆ. ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಎಲ್ಲ ಪಕ್ಷದ ನಾಯಕರು ಸೇರಿದಂತೆ ಸುಮಾರು 48 ಮಂದಿಯ ಹನಿಟ್ರ್ಯಾಪ್ ಸಿ.ಡಿ. ಮಾಡಲಾಗಿದೆ ಎಂದು ಸದನದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಸೂಕ್ತ ತನಿಖೆ ಆಗಬೇಕು, ಸತ್ಯಾಸತ್ಯತೆ ಹೊರಬರಲಿ ಎಂದು ಗೃಹ ಸಚಿವ ಜಿ. ಪರಮೇಶ್ವರ​​ ಅವರಲ್ಲಿ ಮನವಿ ಮಾಡಿದ್ದಾರೆ.
ಬಜೆಟ್ ಭಾಷಣದ ಮೇಲಿನ ಚರ್ಚೆ ವೇಳೆ ಹನಿಟ್ರ್ಯಾಪ್ ವಿಚಾರ ಪ್ರಸ್ತಾವಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ʼʼರಾಜ್ಯದಲ್ಲಿ ಸಹಕಾರಿ ಸಚಿವ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್‌ನ ಪ್ರಯತ್ನ ನಡೆದಿದೆ. ಆ ಮೂಲಕ ಜನಪ್ರತಿನಿಧಿಗಳನ್ನು ಬ್ಲ್ಯಾಕ್​ಮೇಲ್ ಮಾಡುವ ಕೆಟ್ಟ ಪ್ರವೃತ್ತಿ ಕಂಡುಬರುತ್ತಿದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದರು.
ಈ ವೇಳೆ ಪ್ರತಿಕ್ರಿಯಿಸಿದ ರಾಜಣ್ಣ, ”ರಾಜ್ಯವು ಪೆನ್​ಡ್ರೈವ್​, ಸಿ.ಡಿ. ಕಾರ್ಖಾನೆ ಆಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

”ಸುಮಾರು 48 ಜನರ ಮೇಲೆ ಹನಿಟ್ರ್ಯಾಪ್ ಸಿಡಿ, ಪೆನ್​ಡ್ರೈವ್ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ನನ್ನ ಮೇಲಿನ ಆರೋಪಕ್ಕೆ ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇನೆ. ಇದನ್ನು ತನಿಖೆ ನಡೆಸಬೇಕು. ಇದರ ಹಿಂದೆ ಯಾರಿದ್ದಾರೆ ಎನ್ನುವ ವಿಚಾರ ಹೊರಗೆ ಬರಲಿ” ಎಂದು ಸಚಿವ ರಾಜಣ್ಣ ಆಗ್ರಹಿಸಿದ್ದಾರೆ.
ನಾನು ಈ ಬಗ್ಗೆ ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇನೆ. ನನ್ನ ಮೇಲೆ ಯತ್ನಿಸಲಾದ ಹನಿಟ್ರ್ಯಾಪ್ ಬಗ್ಗೆ ಪುರಾವೆ ಇಟ್ಟುಕೊಂಡಿದ್ದೇನೆ. ಗೃಹ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕುʼʼ ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ನಿರ್ಧಾರ
ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ ‘ ಸದನದ ಗೌರವವನ್ನು ಕಾಪಾಡಬೇಕಾದರೆ ಇದಕ್ಕೆ ಇತಿಶ್ರೀ ಹಾಡಬೇಕಾಗಿದೆ. ರಾಜಣ್ಣ ಅವರು ಈ ಸಂಬಂಧಿಸಿದ ಮನವಿ ಕೊಡುತ್ತಾರೆ. ಅದರ ಆಧಾರದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ಮಾಡುತ್ತೇನೆ ಎಂದು ಸದನದಲ್ಲಿ ಘೋಷಣೆ ಮಾಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement