ಬೆಂಗಳೂರು : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿಕರ ವಿಡಿಯೋ ಹರಿಬಿಟ್ಟಿದ್ದ ಯೂಟ್ಯೂಬರ್ ಸಮೀರ್ ಎಂಡಿ ಅಪ್ಲೋಡ್ ಮಾಡಿದ್ದ ವಿಡಿಯೋವನ್ನು ತೆಗೆದುಹಾಕಲು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವುಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ವಿಡಿಯೋವನ್ನು ಯೂಟ್ಯೂಬ್ ನಿರ್ಬಂಧಿಸಿದೆ.
ಧರ್ಮಸ್ಥಳದ ಎಸ್ ಸುಕೇಶ ಮತ್ತು ಶೀನಪ್ಪ ಮೂಲ ದಾವೆಯ ಭಾಗವಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಎಸ್ ನಟರಾಜ ಅವರು ಪುರಸ್ಕರಿಸಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಪ್ರತಿವಾದಿಯಾಗಿರುವ ಎಂ ಡಿ ಸಮೀರ್, ಧೂತ ಸಮೀರ ಎಂ.ಡಿ. ಯೂಟ್ಯೂಬ್ ಚಾನಲ್, ಸಮೀರ ಎಂ ಡಿ ಯೂಟ್ಯೂಬ್ ಚಾನಲ್ ಮತ್ತು ಅವರ ಬೆಂಬಲಿಗರು ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ದ ಯಾವುದೇ ತೆರನಾದ ಆಧಾರರಹಿತ ಸುದ್ದಿ/ಮಾಹಿತಿ/ವಿಚಾರ ಪ್ರಸಾರ/ಹಂಚಿಕೆ ಮಾಡದಂತೆ ನ್ಯಾಯಾಲಯವು ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.
ಅಲ್ಲದೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ದ ಯೂಟ್ಯೂಬ್ ಎಲ್ಎಲ್ಸಿ, ಇನ್ಸ್ಟಾಗ್ರಾಂ ಎಲ್ಎಲ್ಸಿ, ಫೇಸ್ಬುಕ್, ಗೂಗಲ್, ಮೆಟಾದಲ್ಲಿ ಮಾಡಿರುವ ಆಧಾರರಹಿತ ಆರೋಪಗಳನ್ನು ಉಲ್ಲೇಖಿತ ಯುಆರ್ಎಲ್ಗಳನ್ನು ತೆಗೆದು ಹಾಕಬೇಕು ಎಂದು ಏಕಪಕ್ಷೀಯ ಮಧ್ಯಂತರ ಕಡ್ಡಾಯ ಪ್ರತಿಬಂಧಕಾದೇಶ ಮಾಡಿ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಎಲ್ಲಾ ಪ್ರತಿವಾದಿಗಳಿಗೂ ಸಮನ್ಸ್ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ