ನ್ಯಾಯಮೂರ್ತಿ ಯಶವಂತ ವರ್ಮಾ ಅಲಹಾಬಾದ್ ಹೈಕೋರ್ಟ್‌ ಗೆ ವರ್ಗಾವಣೆ

ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ಅವರ ಮೂಲ ಹೈಕೋರ್ಟ್‌ ಆದ ಅಲಹಾಬಾದ್ ಹೈಕೋರ್ಟಿಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಇದೇ ವೇಳೆ ಅವರಿಗೆ ನ್ಯಾಯಾಂಗ ಕಾರ್ಯ ವಹಿಸದಂತೆ ಅಲಾಹಾಬಾದ್‌ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.
ಮಾರ್ಚ್ 24 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ 14 ರ ಸಂಜೆ ನ್ಯಾ. ವರ್ಮಾ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಈ ವೇಳೆ, ಅಗ್ನಿಶಾಮಕ ಸಿಬ್ಬಂದಿಗೆ ಅವರ ಮನೆಯಲ್ಲಿ ಸುಟ್ಟು ಕರಕಲಾದ ಅಪಾರ ಪ್ರಮಾಣದ ನಗದು ದೊರೆತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮಧ್ಯಪ್ರದೇಶದ ರೇವಾ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದ ನ್ಯಾ. ವರ್ಮಾ 1992ರಲ್ಲಿ ವಕೀಲರಾಗಿ ಸೇರ್ಪಡೆಯಾಗಿದ್ದರು. ಅಲಾಹಾಬಾದ್ ಹೈಕೋರ್ಟ್‌ ವಿಶೇಷ ವಕೀಲರಾಗಿ ಮತ್ತು ಉತ್ತರ ಪ್ರದೇಶ ರಾಜ್ಯದ ಮುಖ್ಯ ಸ್ಥಾಯಿ ವಕೀಲರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. 2014ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಗೆ ನೇಮಕವಾಗಿದ್ದರು.
ಅವರನ್ನು ಫೆಬ್ರವರಿ 2017 ರಲ್ಲಿ ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿತ್ತು. ಅಕ್ಟೋಬರ್ 11, 2021 ರಂದು ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಪ್ರಮುಖ ಸುದ್ದಿ :-   ವೀಡಿಯೊಗಳು...| ಪಾಕಿಸ್ತಾನದ 4 ವಾಯುನೆಲೆಗಳ ಭಾರತದ ದಾಳಿ, ಡ್ರೋನ್ ಉಡಾವಣಾ ಪ್ಯಾಡ್‌ ನಾಶ, ಪಾಕ್‌ 2 ಫೈಟರ್ ಜೆಟ್ ಹೊಡೆದುರುಳಿಸಿದ ಸೇನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement