6 ವಾರಗಳಲ್ಲಿ ಓಲಾ, ಉಬರ್, ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು : ಓಲಾ, ಉಬರ್‌ ಮತ್ತು ರ‍್ಯಾಪಿಡೊ ಬೈಕ್‌ ಟ್ಯಾಕ್ಸಿ ಸೇವೆಯನ್ನು ಸಂಬಂಧಿತ ಸಂಸ್ಥೆಗಳು ಆರು ವಾರಗಳಲ್ಲಿ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶ ಮಾಡಿದೆ.
ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಗೆ ನಿರ್ದೇಶನ ಕೋರಿ ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌, ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮಪ್ರಸಾದ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿದೆ.
2022ರಲ್ಲಿ ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸುವ ಕುರಿತು ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದವು.

ಈ ಅರ್ಜಿಗಳ ವಿಚಾರಣೆಯ ವೇಳೆ 1988ರ ಮೋಟಾರು ವಾಹನ ಕಾಯ್ದೆ ಹಾಗೂ ಸೆಕ್ಷನ್ 93ರಡಿಯಲ್ಲಿ ಬರುವ ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ಅರ್ಜಿದಾರರು ಬೈಕ್ ಟ್ಯಾಕ್ಸಿ ಸೇವೆ ನೀಡಬಹುದು. ಆದರೆ ರಾಜ್ಯ ಸರ್ಕಾರ ಓಲಾ, ಉಬರ್ ಇನ್ನಿತರ ಬೈಕ್ ಟ್ಯಾಕ್ಸಿಗಳಿಗೆ ನಿಯಮ ರೂಪಿಸಿಲ್ಲ. ಬೈಕ್‌ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ನಿಯಂತ್ರಣ ಕ್ರಮ ರೂಪಿಸಲು ಮತ್ತು ಸಾರಿಗೇತರ ವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಆಗದು. ಹೀಗಾಗಿ, ನಿಯಮಗಳಿಲ್ಲದೇ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹಾಗೂ, ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ, ಉಬರ್‌ ಮತ್ತಿತರ ಸಂಸ್ಥೆಗಳು ಆರು ವಾರಗಳ ಒಳಗೆ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಅಲ್ಲದೆ, 3 ತಿಂಗಳಲ್ಲಿ ನಿಯಮ ರೂಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ

ಪ್ರಮುಖ ಸುದ್ದಿ :-   ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು ; ನಾಲ್ವರ ರಕ್ಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement