ಅಕ್ಷರಲೋಕದ ನಂದಾದೀಪ ಮಹಾಂತಪ್ಪ ನಂದೂರ ಅಭಿನಂದನ ಗ್ರಂಥ ಏ.4ರಂದು ಲೋಕಾರ್ಪಣೆ

(೪-೦೪-೨೦೨೫) ಕೇಶ್ವಾಪುರ ರೈಲ್ವೆ ಅಧಿಕಾರಗಳ ಕ್ಲಬ್‌ನಲ್ಲಿ ಮಹಾಂತಪ್ಪ ನಂದೂರ ಅವರ “ನಂದ ದುರಿತ ಜ್ಯೋತಿ”ಅಭಿನಂದನ ಗ್ರಂಥ ಲೋಕಾರ್ಪಣೆಯಾಗುತ್ತಿದ್ದು, ಈ ನಿಮಿತ್ತ ಲೇಖನ)
ವೃತ್ತಿ ರೈಲ್ವೆ ಇಲಾಖೆ, ಪ್ರವೃತ್ತಿ ಕಥೆ, ಕವನ, ನಾಟಕ ಮುಂತಾದ ಸಾಹಿತ್ಯಾಸಕ್ತಿಯ ಚಟುವಟಿಕೆಗಳು…ಇದು ಖ್ಯಾತ ಕವಿ ಮಹಾಂತಪ್ಪ ನಂದೂರ ಅವರ ವ್ಯಕ್ತಿತ್ವವನ್ನು ಬಣ್ಣಿಸಬಹುದಾದ ಒಂದು ವಾಕ್ಯದ ನಿರೂಪಣೆ. ಮೂಲತಃ ಕಲಬುರಗಿಯವರಾದ ಇವರು ಉದ್ಯೋಗಕ್ಕಾಗಿ ಹುಬ್ಬಳ್ಳಿಗೆ
ಬಂದು ನೆಲೆಸಿ ಇಲ್ಲಿಯೇ ಬದುಕು ಕಟ್ಟಿಕೊಂಡದ್ದಷ್ಟೇ ಅಲ್ಲಮ ಸಾಹಿತ್ಯ ಕೃಷಿಯನ್ನೂ ಮಾಡಿದವರು.
ಕಲಬುರಗಿ ಜಿಲ್ಲೆಯ ಪಟ್ಟಣ ಗ್ರಾಮದ ಕೃಷಿ ಮನೆತನದಲ್ಲಿ ಜನಿಸಿದ ಮಹಾಂತಪ್ಪ ಅವರು ಪ್ರಾಥಮಿಕ ಶಿಕ್ಷಣವನ್ನು ಪಟ್ಟಣದಲ್ಲಿ, ಪ್ರೌಢ ಶಿಕ್ಷಣವನ್ನು ಕಡಗಂಚಿಯಲ್ಲಿ, ಕಾಲೇಜು ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಕಲಬುರಗಿಯ ಶರಣಬಸವೇಶ್ವರ ವಿವಿಯಲ್ಲಿ ಪೂರೈಸಿದವರು. ಕಲಬುರಗಿಯ ಕಲಾ
ಮಹಾವಿದ್ಯಾಲಯ, ಗುಲ್ಬರ್ಗ ವಿಶ್ವವಿದ್ಯಾಲಯಗಳಲ್ಲಿ ಪದವಿ ಹಂತದಲ್ಲಿಯೇ ಸಾಹಿತ್ಯಕ ಒಲವು ಬೆಳೆಸಿಕೊಂಡಿದ್ದ ಮಹಾಂತಪ್ಪ ಅವರು ಉದ್ಯೋಗಕ್ಕೆ ಸೇರಿದ
ನಂತರ ಸಾಹಿತ್ಯ ಕೃಷಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರು. ಸಮಾಜದಲ್ಲಿನ ಅಸಮಾನತೆ, ಅನ್ಯಾಯ, ಭ್ರಷ್ಟಾಚಾರಗಳ ವಿರುದ್ಧ ಧ್ವನಿ ಎತ್ತುವ ಜೊತೆಗೆ ಶಬ್ದಗಳ ಜೋಡಣೆಯ ಕಲೆಯ ಪ್ರಭಾವಕ್ಕೆ ಒಳಗಾಗಿ ಕವನಗಳನ್ನು ರಚಿಸುವ ಮೋಡಿಗೆ ಸಿಲುಕಿದವರು. ಮಹಾಂತಪ್ಪ ಅವರ ಕವನ ಸಂಕಲನ `ಉದಕದೊಳಗಣ ಬೆಂಕಿ’ ಪ್ರಕಟವಾದದ್ದು ೨೦೦೨ರಲ್ಲಿ. ಇದರ ನಂತರ ಸುನಾದ ಸಹಿತ ರಸಾತ್ಮಕ ಕವಿತೆಗಳನ್ನು ಒಳಗೊಂಡ ‘ದೂರದ ಪದ’ ಸಂಕಲನವು ಪ್ರಕಟವಾಗಿದ್ದು ೨೦೦೭ರಲ್ಲಿ. ಇದರಲ್ಲಿ ಅರ್ಧಭಾಗ ಸುನೀತಗಳಿವೆ. ಮುಂದೆ ೨೦೧೨ರಲ್ಲಿ ‘ಜೀವ ಕೊಳಲು’ ಕವನ ಸಂಕಲನ ಹೊರಬಂತು.

ಅವರು ಸೃಜನಾತ್ಮಕ ಚಟುವಟಿಕೆ ಕೇವಲ ಕಾವ್ಯ ರಚನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಲಬುರಗಿ ಭಾಗದ ಭಾಷೆಯ ಸೊಗಡು, ಪರಿಸರ, ಜೀವನ, ನಂಬಿಕೆ ಮತ್ತು ಕಂದಾಚಾರಗಳನ್ನು ಒಳಗೊಂಡಿರುವ `ಆಯಿತಾರ ಅಮಾಸಿ’ ಎಂಬ ಕಥಾ ಸಂಕಲನ ನಂದೂರರ ಸೃಜನಶೀಲತೆಯ ಇನ್ನೊಂದು ಮಗ್ಗಲನ್ನು ತೆರೆದಿಟ್ಟಿದೆ. ಆಯಿತಾರ ಅಮಾಸಿ ಕಥೆಗೆ ಚಂಪಾರ ಸಂಪಾದಕತ್ವದ `ಸಂಕ್ರಮಣ’ದಲ್ಲಿ ಬಹುಮಾನವನ್ನೂ ಪಡೆದು ಓದುಗರ ಮೆಚ್ಚುಗೆಗೆ ಪಾತ್ರವಾಯಿತು. ಇವರ ಇನ್ನುಳಿದ ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ವಿಮರ್ಶಾ ಲೇಖನಗಳ ಸಂಗ್ರಹ ‘ಆನಂದ ನಿನಾದ’ವೂ ಬೆಳಕು ಕಂಡಿದೆ. ಇನ್ನು ಮಕ್ಕಳಿಗಾಗಿ ನಂದೂರ ಅವರು ಪಂಡಿತ ಪುಟ್ಟರಾಜ ಗವಾಯಿಗಳ ಜೀವನದ ದರ್ಶನ ಮಾಡಿಸಿರುವ `ನಾದಲೋಕದ ಪುಟ್ಟರಾಜ’ ಎಂಬ ಕೃತಿಯನ್ನೂ ರಚಿಸಿದ್ದಾರೆ. ಸೃಜನಶೀಲ ಬರಹದಲ್ಲಿ ಪ್ರಯೋಗಶೀಲತೆ ಇರಬೇಕೆಂಬ ಆಶಯದೊಂದಿಗೆ ಸುನೀತ ಕಾವ್ಯ ರಚನೆಯನ್ನು ಗಂಭೀರವಾಗಿ ಸ್ವೀಕರಿಸಿರುವ ಮಹಾಂತಪ್ಪ ನಂದೂರ ಅವರು ೬೩ ವಚನಕಾರರ ವ್ಯಕ್ತಿತ್ವ- ಜೀವನ ಮೌಲ್ಯಗಳನ್ನು ಒಟ್ಟು ೭೫ ಸುನೀತಗಳಲ್ಲಿ ಹಿಡಿದಿಟ್ಟು `ಕಲ್ಯಾಣವೆಂಬ ಪ್ರಣತಿ’ ಎಂಬ ಕೃತಿಯನ್ನು ಪ್ರಕಟಿಸದ್ದಾರೆ. ಒಂದರ್ಥದಲ್ಲಿ ಇದು ಇವರ ಕಾವ್ಯ ಜೀವನಕ್ಕೆ ಹೊಸ ತಿರುವನ್ನೂ ತಂದುಕೊಟ್ಟಿತು. ಇದಕ್ಕೆ ಓದುಗರಿಂದ ವ್ಯಕ್ತವಾದ ಪ್ರತಿಕ್ರಿಯೆಯಿಂದ ಪ್ರೇರಣೆ ಪಡೆದ ಮಹಾಂತಪ್ಪ ಅವರು `ಅರಿವೇ ಪ್ರಮಾಣು’ ಎಂಬ ಶೀರ್ಷಿಕೆಯಡಿ ೩೭೫ ಸುನೀತಗಳನ್ನು ಒಳಗೊಂಡ ದೀರ್ಘ (ಅಕ್ಕನಾಗಮ್ಮ- ಜೀವನ ಕಾವ್ಯ) ಕಾವ್ಯ ಕೃತಿಯನ್ನು ರಚನೆ ಮಾಡಿದರು. ಈ ಮಹತ್ವದ ಬೃಹತ್ ಕೃತಿಯು ನಾಡೋಜ ಚನ್ನವೀರ ಕಣವಿ, ಡಾ.
ಎಚ್.ಎಸ್. ವೆಂಕಟೇಶಮೂರ್ತಿ, ಡಾ. ಬಸವರಾಜ ಸಾದರ, ಡಾ.ಬಸವರಾಜ ಸಬರದ, ಡಾ. ಬಸು ಬೇವಿನಗಿಡದ, ವಿಮರ್ಶಕ ಸಿ.ಎಸ್. ಭೀಮರಾಯ ಮೊದಲಾದ ನಾಡಿನ ವಿದ್ವತ್ ವಲಯದ ಪ್ರಶಂಸೆಗೆ ಪಾತ್ರವಾಗಿದೆ. ಈ ಕೃತಿ ಕುರಿತು ಪ್ರೊ. ಶಿವಪುತ್ರಪ್ಪ ಆಶಿ ಅವರು ಅರಿವಿನ ದಾರಿ ಎಂಬ ಸ್ವತಂತ್ರ ವಿಶ್ಲೇಷಣಾತ್ಮಕ ಕೃತಿಯನ್ನೂ ರಚಿಸಿರುವುದು ವಿಶೇಷವಾಗಿದೆ. ನಂದೂರ ಅವರ ಅನೇಕ ಕವಿತೆಗಳು ಪತ್ರಿಕೆಗಳಲ್ಲಿ, ಸಂಕಲನಗಳಲ್ಲಿ, ನಿಯತಕಾಲಿಕೆಗಳಲ್ಲಿ ಸಾಹಿತ್ಯ ಅಕಾಡೆಮಿಯ ಸಂಗ್ರಹದಲ್ಲಿ, ಹಾಗೂ ಬುಕ್ ಬ್ರಹ್ಮ ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟವಾಗಿವೆ. ಬೆಂಗಳೂರು ದೂರದರ್ಶನ (ಚಂದನ) ನಡೆಸಿದ ಬೆಳಗು ಕಾರ್ಯಕ್ರಮ, ಜೀವಿ ಜಾಲತಾಣದ ಬದುಕು- ಬರಹ- ಸಂದರ್ಶನವು ಎರಡು ಕಂತುಗಳಲ್ಲಿ ಯೂ ಟ್ಯೂಬ್ ನಲ್ಲಿ ಪ್ರಸಾರವಾಗಿವೆ. ಆಕಾಶವಾಣಿಯಲ್ಲಿ ಹಲವು ಸಲ ಕಾವ್ಯ ವಚನ ಮಾಡಿದ್ದಾರೆ. ಇವರು ಬರೆದ ಭಾವಗೀತೆ `ಕನಸುಗಳಿಗೆ ಕಲ್ಲು’ ತಿಂಗಳ ಹಾಡಾಗಿ ಬಿತ್ತರವಾಗಿದೆ. ಇನ್ನೊಂದು ಕವನ ಧಾರವಾಡ ಉತ್ಸವದಲ್ಲಿ ಕಾವ್ಯ- ಕುಂಚ ರೂಪದಲ್ಲಿ ಮೂಡಿಬಂದಿದೆ.

ಪ್ರಮುಖ ಸುದ್ದಿ :-   ಶಿರಸಿ-ಕುಮಟಾ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌

ಪುರಸ್ಕಾರಗಳು
ಕಳೆದ ನಾಲ್ಕೆೈದು ದಶಕಗಳಿಂದ ಕಾವ್ಯ ಕೃಷಿಯಲ್ಲಿ ತೊಡಗಿರುವ ಮಹಾಂತಪ್ಪ ನಂದೂರ ಅವರಿಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಹುಬ್ಬಳ್ಳಿ- ಧಾರವಾಡ ಮಹಾನಗರಪಾಲಿಕೆಯ ವತಿಯಿಂದ ನೀಡಲಾಗುವ ಧೀಮಂತ ರಾಜ್ಯೋತ್ಸವ ಗೌರವ ಪ್ರಶಸ್ತಿ, ನೈಋತ್ಯ ರೈಲ್ವೆ ಕನ್ನಡ ಸಂಘ
ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳಿಂದ ಸನ್ಮಾನಕ್ಕೆ ಇವರು ಭಾಜನರಾಗಿದ್ದಾರೆ. ಇವರ `ಕಲ್ಯಾಣವೆಂಬ ಪ್ರಣತಿ’ಗೆ ೨೦೧೫ರಲ್ಲಿ ರಾಜ್ಯ ಮಟ್ಟದ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ ೨೦೧೫, `ಅರಿವೇ ಪ್ರಮಾಣು’ ಕೃತಿಗೆ ಮೋಹನ ಕುರಡಗಿ ಕಾವ್ಯ ಪ್ರಶಸ್ತಿ, ಬೆಟ್ಟದೂರು ಪ್ರತಿಷ್ಠಾನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ ಮತ್ತು ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗಳು ಲಭಿಸಿವೆ. ೨೦೨೩ರಲ್ಲಿ ಕೇಂದ್ರ
ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದ ಕೃತಿಗಳಲ್ಲಿ `ಅರಿವೇ ಪ್ರಮಾಣು’ ಕೃತಿಯೂ ಸಹ ಇತ್ತು ಎಂಬುದು ಗಮನಾರ್ಹವಾಗಿದೆ.
ಮಹಾಂತಪ್ಪ ಅವರು ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆಯಲ್ಲಿ ಸದಾ ಸಕ್ರಿಯರಾಗಿದ್ದು, ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ಕನ್ನಡ ಸಂಘವನ್ನು
ಸ್ಥಾಪಿಸಿದ್ದಾರೆ. ಇದರ ಅಧ್ಯಕ್ಷರಾಗಿ ನೈಋತ್ಯ ರೇಲ್ವೆ ವಲಯ ವ್ಯಾಪ್ತಿಯಲ್ಲಿರುವ ಬಹುಭಾಷಿಕ ನೆಲೆಯ ಸಹೋದ್ಯೋಗಿಗಳಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುವ ಮೂಲಕ ಅಲ್ಲಿ ಕನ್ನಡಪರ ವಾತಾವರಣವನ್ನು ನಿರ್ಮಿಸಿದ್ದಾರೆ.

ಪ್ರಮುಖ ಸುದ್ದಿ :-   ಮಂಗಳೂರು ವಿವಿ 'ಯಕ್ಷಮಂಗಳ ಕೃತಿ ಪ್ರಶಸ್ತಿʼಗೆ ಅಶೋಕ ಹಾಸ್ಯಗಾರರ 'ದಶರೂಪಕಗಳ ದಶಾವತಾರ' ಸಂಶೋಧನಾ ಪುಸ್ತಕ ಆಯ್ಕೆ

ವಚನ ಸಾಹಿತ್ಯವು ಇವರ ಹೃದಯಕ್ಕೆ ಹತ್ತಿರವಾದ ವಿಷಯವಾಗಿದ್ದು, ಅದರ ಮತ್ತು ಅಂತಃಶಕ್ತಿಗೆ ಮಾರುಹೋಗಿರುವ ನಂದೂರ ಅವರು, ತಮ್ಮ ಕೃತಿಗಳ ಮೂಲಕ ಶರಣರ ಸಹಜ ಜೀವನವನ್ನು ಮೌಲಿಕ ಸಾಹಿತ್ಯವನ್ನು ನಾಡಿಗೆ ಹಂಚುತ್ತಿದ್ದಾರೆ. ಹರಿಹರ, ಕುವೆಂಪು, ಡಾ. ದ.ರಾ.ಬೇಂದ್ರೆ, ಡಾ. ಚನ್ನವೀರ ಕಣವಿ, ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದವರ ಕಾವ್ಯಗಳು ತಮ್ಮ ರಚನೆಗಳಿಗೆ ಪ್ರೇರಕವಾಗಿವೆ ಎಂದು ಸೌಜನ್ಯದಿಂದಲೇ ನುಡಿಯುತ್ತಾರೆ ಕವಿ
ಮಹಾಂತಪ್ಪ ನಂದೂರ. ಕಾವ್ಯವು ಮೊದಲು ಓದುಗರಿಗೆ ತಟ್ಟುತ್ತವೆ, ನಂತರ ಅವರಿಗೆ ಅರ್ಥವಾಗುತ್ತವೆ. ಕಾವ್ಯಗಳು ಜನಸಾಮನ್ಯರ ಮನ, ಹೃದಯ ತಲ ಸ್ಪರ್ಶಿಯಾಗಿ ಸಂಸ್ಕಾರಗಳನ್ನು ನೀಡುತ್ತವೆ ಎನ್ನುವ ಮಹಾಂತಪ್ಪ ನಂದೂರ ಅವರು ಕನ್ನಡ ಕಾವ್ಯ ಪರಿಸರ ಇಂದು ಶ್ರೀಮಂತವಾಗಿವೆ ಎನ್ನುತ್ತಾರೆ.
ಯುವ ಕವಿಗಳು ಹಿರಿಯ ಕವಿಗಳ ಕಾವ್ಯಗಳನ್ನು ಅರ್ಥೈಯಿಸಿಕೊಂಡು ಕಾವ್ಯಗಳನ್ನು ರಚಿಸಬೇಕೆನ್ನುತ್ತಾರೆ.
ಸರಳ ಸಜ್ಜನಿಕೆಯ ಮಹಾಂತಪ್ಪ ನಂದೂರ ಅವರು ತಂದೆ ಬಸವಣ್ಣೆಪ್ಪ ತಾಯಿ ಶಿವಲಿಂಗಮ್ಮ ಪತ್ನಿ ಪುಷ್ಪಾ, ಮಗ ಡಾ. ಅಭಿಷೇಕ, ಮಗಳು ದೀಕ್ಷಾ, ಅಳಿಯ ರಮೇಶ, ಸ್ನೇಹಿತರು, ಬಂಧುಗಳು ಮತ್ತು ಹಿತೈಷಿಗಳನ್ನು ಸದಾ ಸ್ಮರಿಸುತ್ತಾರೆ.
-ಡಾ. ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement