ಸಾವರ್ಕರ್‌ ಕುರಿತ ಹೇಳಿಕೆ: ರಾಹುಲ್‌ ವಿರುದ್ಧದ ಸಮನ್ಸ್ ರದ್ದುಪಡಿಸಲು ನಿರಾಕರಿಸಿದ ಅಲಾಹಾಬಾದ್‌ ಹೈಕೋರ್ಟ್‌

ಲಕ್ನೋ : ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದ ಸತ್ರ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 397 (ಕೆಳ ನ್ಯಾಯಾಲಯದ ದಾಖಲೆಗಳ ಪರಿಶೀಲನೆ) ಅಡಿಯಲ್ಲಿ ಸತ್ರ ನ್ಯಾಯಾಲಯದ ಕದತಟ್ಟಲು ರಾಹುಲ್‌ ಅವರಿಗೆ ಅವಕಾಶವಿದೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಸುಭಾಷ ವಿದ್ಯಾರ್ಥಿ ಅವರು ರಾಹುಲ್‌ ಅವರ ಅರ್ಜಿ ಪುರಸ್ಕರಿಸಲು ನಿರಾಕರಿಸಿದರು.
ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ 2022ರಲ್ಲಿ ನಡೆದಿದ್ದ ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭದ ಸಮಾವೇಶದ ವೇಳೆ ಸಾವರ್ಕರ್‌ ವಿರುದ್ಧ ನೀಡಿದ್ದ ಹೇಳಿಕೆಗಳಿಗಾಗಿ ವಕೀಲ ನೃಪೇಂದ್ರ ಪಾಂಡೆ ಎಂಬವರು ರಾಹುಲ್‌ ವಿರುದ್ಧ ದೂರು ದಾಖಲಿಸಿದ್ದರು.
ಶುಕ್ರವಾರ ನಡೆದ ವಿಚಾರಣೆ ವೇಳೆ ರಾಹುಲ್ ಅವರ ಪರವಾಗಿ ವಕೀಲರಾದ ಪ್ರಾಂಶು ಅಗರ್ವಾಲ್, ಮೊಹಮ್ಮದ್ ಸಮರ್ ಅನ್ಸಾರಿ ಮತ್ತು ಮೊಹಮ್ಮದ್ ಯಾಸಿರ್ ಅಬ್ಬಾಸಿ ವಾದ ಮಂಡಿಸಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಕ್ನೋ ಸೆಷನ್ಸ್ ನ್ಯಾಯಾಲಯವು ರಾಹುಲ್‌ ವಿರುದ್ಧ ಸಮನ್ಸ್ ಆದೇಶವನ್ನು ಹೊರಡಿಸಿತ್ತು. ರಾಹುಲ್‌ ಗಾಂಧಿ ವಿರುದ್ಧ ಮೇಲ್ನೋಟಕ್ಕೆ ಪ್ರಕರಣವಿದೆ ಎಂದು ಹೇಳಿದ್ದ ನ್ಯಾಯಾಲಯ, ಅವರನ್ನು ತನ್ನ ಮುಂದೆ ಹಾಜರಾಗುವಂತೆ ನಿರ್ದೇಶಿಸಿತ್ತು. ಸೆಷನ್ಸ್ ನ್ಯಾಯಾಲಯದ ಈ ಸಮನ್ಸ್ ಆದೇಶವನ್ನು ಪ್ರಶ್ನಿಸಿ ಗಾಂಧಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ವಕೀಲ ನೃಪೇಂದ್ರ ಪಾಂಡೆ ಅವರು ರಾಹುಲ್‌ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ (ದ್ವೇಷ ಪ್ರಚೋದನೆ) ಮತ್ತು 505 (ಸಾರ್ವಜನಿಕ ದುಷ್ಕೃತ್ಯ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಬಹುಭಾಷಾ ನಟ ಮುಕುಲ್‌ ದೇವ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement