ಮದುರೈ : ೭೧ ವರ್ಷ ವಯಸ್ಸಿನ ಹಿರಿಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಮತ್ತು ಕೇರಳದ ಪಾಲಿಟ್‌ಬ್ಯೂರೋ ಸದಸ್ಯ ಎಂಎ ಬೇಬಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ (ಏಪ್ರಿಲ್ 5) ತಮಿಳುನಾಡಿನ ಮಧುರೈನಲ್ಲಿ ನಡೆದ ಪಾಲಿಟ್‌ಬ್ಯೂರೋ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಬೇಬಿ ಹೆಸರನ್ನು ಹಿರಿಯ ನಾಯಕ ಪ್ರಕಾಟ ಕಾರಟ್ ಪ್ರಸ್ತಾಪಿಸಿದರು. ಇವರು ಇಎಂಎಸ್ ನಂಬೂದಿರಿಪಾಡ್ ನಂತರ ಪಕ್ಷವನ್ನು ಮುನ್ನಡೆಸುತ್ತಿರುವ ಕೇರಳದ ಎರಡನೇ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಈ ನಿರ್ಧಾರದ ಬಗ್ಗೆ ಸಿಪಿಐ(ಎಂ) ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ.
ವರದಿಗಳ ಪ್ರಕಾರ, 16 ಪಾಲಿಟ್‌ಬ್ಯೂರೋ ಸದಸ್ಯರಲ್ಲಿ 11 ಮಂದಿ ಬೇಬಿ ಹೆಸರನ್ನು ಅನುಮೋದಿಸಿದರು ಮತ್ತು ಉಳಿದವರು ವಿರೋಧಿಸಿದರು. ಅವರ ನಾಮನಿರ್ದೇಶನವನ್ನು ವಿರೋಧಿಸಿದವರಲ್ಲಿ ಸುರ್ಜ್ಯ ಕಾಂತ ಮಿಶ್ರಾ, ಮೊಹಮ್ಮದ್ ಸಲೀಂ, ನೀಲೋತ್ಪಲ ಬಸು, ರಾಮಚಂದ್ರ ಡೋಮ್ ಮತ್ತು ಅಶೋಕ್ ಧವಳೆ ಸೇರಿದ್ದಾರೆ.
ಕೊಲ್ಲಂನ ಪ್ರಕ್ಕುಳಂ ಮೂಲದ ಬೇಬಿ, ವಿದ್ಯಾರ್ಥಿಯಾಗಿ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ಸಿಪಿಐ(ಎಂ) ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ನೊಂದಿಗೆ ಕೆಲಸ ಮಾಡಿದರು. ನಂತರ ಅವರು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI) ಜೊತೆ ಸಂಬಂಧ ಹೊಂದಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲಿನಲ್ಲಿದ್ದ ಹಲವಾರು ಕಮ್ಯುನಿಸ್ಟ್ ನಾಯಕರಲ್ಲಿ ಅವರು ಒಬ್ಬರು.
ಬೇಬಿ ಅವರು 32 ನೇ ವಯಸ್ಸಿನಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. 2006 ರಲ್ಲಿ ಅವರು ಕೇರಳ ವಿಧಾನಸಭೆಗೆ ಆಯ್ಕೆಯಾದರು. ಅವರು 2006 ರಿಂದ 2011 ರವರೆಗೆ ವಿಎಸ್ ಅಚ್ಯುತಾನಂದನ್ ಸಂಪುಟದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ