ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಗರ್ಭಿಣಿ ಹಸುವನ್ನು ಕಡಿದು ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಭಟ್ಕಳ ತಾಲೂಕಿನ ಹೆಬಳೆಯ ಕುಕ್ನೀರ್ ಬಳಿಯಲ್ಲಿ ಗರ್ಭಿಣಿ ಹಸು ಕಡಿದು ಹೊಟ್ಟೆಯೊಳಗಿದ್ದ ಕರು ಮತ್ತು ಗೋವಿನ ಬಾಲವನ್ನು ವೆಂಕಟಾಪುರ ನದಿಯಂಚಿನಲ್ಲಿ ಎಸೆದ ದುರುಳರು ಗೋಮಾಂಸದೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಗೋವಿನ ಹೊಟ್ಟೆಯೊಳಗಿದ್ದ ಪುಟ್ಟ ಕರುವನ್ನು ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿದ್ದು, ಗುರುವಾರ ನಾಯಿಯೊಂದು ಚೀಲವನ್ನು ಎಳೆಯುತ್ತಿರುವಾಗ ಸ್ಥಳೀಯರು ನೋಡಿ ಪರಿಶೀಲಿಸಿದ್ದಾರೆ. ಆಗ ಅದರಲ್ಲಿ ಸತ್ತ ಕರು ಇರುವುದು ಪತ್ತೆಯಾಗಿದೆ. ಜೊತೆಗೆ ಹಸುವಿನ ಬಾಲ ಕೂಡ ಅಲ್ಲಿಯೇ ಕಂಡುಬಂದಿದೆ. ತಕ್ಷಣ ಅವರು ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಗರ್ಭಿಣಿ ಗೋವನ್ನು ಕದ್ದು ಹತ್ಯೆಗೈದು ಗೋಮಾಂಸವನ್ನು ಸಾಗಾಟ ಮಾಡಿದ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಈ ಘಟನೆ ನಡೆದ ವರದಿಯಾಗಿದೆ. ಹೊನ್ನಾವರ ತಾಲೂಕಿನಲ್ಲಿ ನಡೆದ ಘಟನೆಯ ಪ್ರಮುಖ ಆರೋಪಿಗಳನ್ನು ಬಂಧಿಸಿದ ನಂತರ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ