ಧಾರವಾಡದಲ್ಲೂ ಜನಿವಾರ ಕತ್ತರಿಸಿ ಸಿಇಟಿ ಬರೆಸಿದ ಸಿಬ್ಬಂದಿ…!?

ಧಾರವಾಡ : ಶಿವಮೊಗ್ಗ, ಬೀದರ ಬಳಿಕ ಇದೀಗ ಧಾರವಾಡದಲ್ಲಿಯೂ ಜನಿವಾರ ಕತ್ತರಿಸಿ ನಂತರ ಸಿಇಟಿ ಪರೀಕ್ಷೆಗೆ ಅವಕಾಶ ಕೊಟ್ಟಿರುವ ಘಟನೆ ನಡೆದಿದೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆಯ ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಧಾರವಾಡ ನಗರದ ಜೆಎಸ್‌ಎಸ್ (JSS) ಕಾಲೇಜಿನ ವಿದ್ಯಾರ್ಥಿ ನಂದನ್ ಏರಿ ಎಂಬವರು ಸಿಇಟಿ ಪರೀಕ್ಷೆ (CET Exam) ಬರೆಯಲು ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿದ್ಯಾರ್ಥಿಗಳ ತಪಾಸಣೆ ಮಾಡುವಾಗ ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಬ್ಬರು ನಂದನ್ ಹಾಕಿಕೊಂಡಿದ್ದ ಜನಿವಾರವನ್ನು ಗಮನಿಸಿದ್ದರು.

ಆಗ ಜನಿವಾರ ಹಾಕಿಕೊಂಡು ಪರೀಕ್ಷಾ ಕೇಂದ್ರದೊಳಗೆ ಹೋಗುವಂತಿಲ್ಲ ಎಂದು ತಡೆದಿದ್ದರು. ಅದಕ್ಕೆ ವಿದ್ಯಾರ್ಥಿ ನಾನು ಬ್ಯಾಗಿನೊಳಗೆ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ ಅದಕ್ಕೂ ಅವಕಾಶ ನೀಡದೇ ಅದಕ್ಕೆ ಸಮಯವಿಲ್ಲ ಎಂದು ಜನಿವಾರವನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಅಚ್ಚರಿಯ ಸಂಗತಿ ಎಂದರೆ ಜನಿವಾರವನ್ನು ಕತ್ತರಿಸಿದ ಸಿಬ್ಬಂದಿ ಅದನ್ನು ಆತನ ಕೈಗೆ ಕೊಟ್ಟು ಒಳಗಡೆ ಕಳಿಸಿದ್ದಾರೆ. ಮಾರನೇ ದಿನವೂ ಜನಿವಾರವಿಲ್ಲದೆ ನಂದನೆ ಪರೀಕ್ಷೆ ಬರೆದಿದ್ದಾರೆ ಎಂದು ಹೇಳಲಾಗಿದೆ.
ಮಾಧ್ಯಮಗಳಲ್ಲಿ ಕಳೆದೆರಡು ದಿನಗಳಿಂದ ಬರುತ್ತಿದ್ದ ಶಿವಮೊಗ್ಗ, ಬೀದರ ಸುದ್ದಿಗಳನ್ನು ಗಮನಿಸಿದ್ದ ಹುಡುಗ ತನಗಾಗಿದ್ದರ ಕುರಿತು ತನ್ನ ತಂದೆಗೆ ತಿಳಿಸಿದ್ದಾನೆ. ಇದನ್ನು ತಿಳಿದ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement