ಬೆಂಗಳೂರು: ನಿವೃತ್ತ ಸೈನಿಕನ ಅತಿಯಾದ ಶಿಸ್ತು ಹಾಗೂ ಕಟ್ಟುನಿಟ್ಟಿಗೆ ಬೇಸತ್ತ ಮಗ ತಾಯಿಯ ಜೊತೆ ಸೇರಿಕೊಂಡು ತಂದೆಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಶನಿವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಮೃತ ವ್ಯಕ್ತಿಯನ್ನು ವಿವೇಕನಗರ ನಿವಾಸಿ ಬೋಲು ಅರಬ್ (47) ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತನ ಪುತ್ರ ಸಮೀರ್ (19) ಮತ್ತು ಪತ್ನಿ ತಬಸ್ಸುಮ್ (37) ಎಂಬವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಬೋಲು ಅರಬ್ ಸೈನಿಕನಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಎರಡು ದಶಕಗಳಿಗೂ ಅಧಿಕ ಸಮಯದಿಂದ ಕುಟುಂಬದೊಂದಿಗೆ ನಗರದಲ್ಲಿ ನೆಲೆಸಿದ್ದರು. ಬೋಲು ಅರಬ್‌ಗೆ ತಬ್ಸಮ್ 2ನೇ ಪತ್ನಿ. ಪುತ್ರ ಸಮೀರ್ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಬೋಲು ಅರಬ್ ಕಟ್ಟುನಿಟ್ಟಾದ ಶಿಸ್ತಿನ ವ್ಯಕ್ತಿಯಾಗಿದ್ದರು. ಪತ್ನಿ ಮತ್ತು ಪುತ್ರನಿಗೂ ಇದನ್ನು ಅನುಸರಿಸುವಂತೆ ಹೇಳುತ್ತಿದ್ದರು. ಬೋಲು ಅರಬ್ ಅವರ ಈ ಶಿಸ್ತು ಪತ್ನಿ ಮತ್ತು ಪುತ್ರನಿಗೆ ಮಾನಸಿಕ ಹಿಂಸೆಯಾಗಿ ಅಸಹನೀಯವಾಯಿತು. ಹೀಗಾಗಿ ತಾಯಿ-ಮಗ ಸೇರಿಕೊಂಡು ಬೋಲು ಅರಬ್ ಅವರಿಗೆ ಶನಿವಾರ ರಾತ್ರಿ ಊಟಕ್ಕೆ ನಿದ್ದೆ ಮಾತ್ರೆ ಬೆರೆಸಿ ನೀಡಿದ್ದರು.
ಊಟ ಮಾಡಿದ ಬಳಿಕ ಬೋಲು ಅರಬ್ ಗಾಢ ನಿದ್ದೆಗೆ ಜಾರಿದ ನಂತರ ರಾತ್ರಿ 1:30ರ ಸುಮಾರಿಗೆ ತಲೆದಿಂಬಿನಿಂದ ಮುಖದ ಮೇಲೆ ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ, ಬೋಲು ಅವರು ಎಚ್ಚರಗೊಂಡಿದ್ದರಿಂದ ಪುತ್ರ ತಲೆ ಹಾಗೂ ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.
ಬೋಲು ಅರಬ್ ಮೃತಪಟ್ಟಿರುವುದು ಖಚಿತವಾದ ಬಳಿಕ ಯಾರೋ ನಾಲ್ಕೈದು ಮಂದಿ ಮನೆಗೆ ನುಗ್ಗಿ ತಂದೆಯನ್ನು ಕೊಲೆ ಮಾಡಿ ಪರಾರಿಯಾದರು ಎಂದು ಹೇಳಿದ್ದಾನೆ. ಬಳಿಕ ನೆರೆ ಮನೆಯ ವ್ಯಕ್ತಿ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ತಾಯಿ-ಮಗನ ವರ್ತನೆ ಬಗ್ಗೆ ಅನುಮಾನಗೊಂಡು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ