ಹಲ್ಗಾಮ್​ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಮೂವರು ಸಾವು

ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮತ್ತೊಬ್ಬ ನಿವಾಸಿ ಸಾವಿಗೀಡಾಗಿದ್ದು, ಒಟ್ಟು ಮೂವರು ಮೃತಪಟ್ಟಿದ್ದಾರೆ.
ಆಂಧ್ರಮೂಲದ ಬೆಂಗಳೂರಿನ ನಿವಾಸಿ ಮಧುಸೂದನ ಸೋಮಿಶೆಟ್ಟಿ ಅವರು ಪಹ್ಲಗಾಮ್‌ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಈ ಪೈಶಾಚಿಕ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ ರಾವ್ ಹಾಗೂ ಬೆಂಗಳೂರಿನ ಮತ್ತಿಕೆರೆಯ ಪ್ರದೇಶದ ಭರತ ಭೂಷಣ (41) ಎಂಬ ಮೃತಪಟ್ಟಿದ್ದಾರೆ ಎಂದು ಈ ಮೊದಲು ಮಾಹಿತಿ ಲಭ್ಯವಾಗಿತ್ತು. ಈಗ ಮಧುಸೂದನ ಅವರು ಮೃತಪಟ್ಟ ಮಾಹಿತಿ ಲಭ್ಯವಾಗಿದೆ.
ಒಂದು ವಾರದ ಹಿಂದೆ ಜನ್ಮ ದಿನ ಆಚರಿಸಿಕೊಂಡಿದ್ದ ಭರತ ಭೂಷಣ ಅವರು ಮೂರು ವರ್ಷದ ಮಗು ಹಾಗೂ ಪತ್ನಿ ಸುಜಾತ ಜೊತೆ ಕಾಶ್ಮೀರಕ್ಕೆ ತೆರಳಿದ್ದರು. ಮೃತದೇಹವನ್ನು ನಗರಕ್ಕೆ ಕರೆತರುವ ಸಲುವಾಗಿ ಸಿದ್ದತೆ ನಡೆಸಲಾಗುತ್ತಿದೆ.

ವೃತ್ತಿಯಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿರುವ ಭರತ ಅವರು ಭದ್ರಪ್ಪ ಲೇಔಟ್​​ನಲ್ಲಿ ಡಯಾಗೋಸ್ಟಿಕ್ ಸೆಂಟರ್ ಸಹ ಹೊಂದಿದ್ದರು. ಈ ಬಗ್ಗೆ ನಗರ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಎಕ್ಸ್​ನಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ.
”ಉಗ್ರ ದಾಳಿಯಲ್ಲಿ ಸಾವನ್ನಪ್ಪಿದ ಭರತ್ ಭೂಷಣ್ ಪತ್ನಿ ಸುಜಾತ ಅವರೊಂದಿಗೆ ಮಾತನಾಡಿದ್ದೇನೆ.‌ ಮೃತದೇಹವನ್ನು ನಗರಕ್ಕೆ ಕರೆತರಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇ‌ನೆ. ಮೃತ ವ್ಯಕ್ತಿಗಳ ಕುಟುಂಬವು ಸುರಕ್ಷಿತವಾಗಿದ್ದಾರೆ. ಆದಷ್ಟು ಬೇಗ ಬೆಂಗಳೂರಿಗೆ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು ; ನಾಲ್ವರ ರಕ್ಷಣೆ

ಉಗ್ರರ ದಾಳಿಯಲ್ಲಿ ಶಿವಮೊಗ್ಗದಿಂದ ಕಾಶ್ಮೀರಕ್ಕೆ ಕುಟುಂಬ ಸಮೇತ ತೆರಳಿದ್ದ ಉದ್ಯಮಿ ಮಂಜುನಾಥ​ ರಾವ್ ಅವರು ಮೃತಪಟ್ಟಿದ್ದಾರೆ. ಅವರು ಏಪ್ರಿಲ್ 19ರಂದು ಅವರು ಪತ್ನಿ ಪಲ್ಲವಿ ಮತ್ತು ಪುತ್ರನ ಜೊತೆಗೆ ಪ್ರವಾಸ ಕೈಗೊಂಡಿದ್ದರು.
ಶಿವಮೊಗ್ಗದ ವಿಜಯನಗರದ ನಿವಾಸಿಯಾಗಿರುವ ಮಂಜುನಾಥ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಇವರ ಪತ್ನಿ ಪಲ್ಲವಿ ಚಿಕ್ಕಮಗಳೂರು ಜಿಲ್ಲೆಯ ಬಿರೂರಿನ ಮ್ಯಾಮ್​ಕೋಸ್​​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುತ್ರ ಅಭಿಜಯ ಇತ್ತೀಚೆಗೆ ಪ್ರಕಟವಾದ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಶೇಕಡಾ 97ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದರು. ಪುತ್ರನ ಸಾಧನೆಯನ್ನು ಸಂಭ್ರಮಿಸಲು ಅವರು ಕಾಶ್ಮೀರ ಪ್ರವಾಸದ ಯೋಜನೆ ಹಾಕಿದ್ದರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮಾಹಿತಿ ನೀಡಿದ್ದಾರೆ.
ಕುಟುಂಬವು ಕಾಶ್ಮೀರದ ಪಹಲ್​ಗಾಂವ್​​ನ ಮಾರುಕಟ್ಟೆಗೆ ಹೋದಾಗ ಉಗ್ರನು ಮಂಜುನಾಥ ಅವರ ಹೆಸರು ಕೇಳಿದ್ದಾನೆ. ಬಳಿಕ ಪತ್ನಿ ಹಾಗೂ ಮಗನ ಮುಂದೆಯೇ ಅವರ ಮೇಲೆ ಗುಂಡು ಹಾರಿಸಿದ್ದಾನೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement