ಪಹಲ್ಗಾಮ್‌ ದಾಳಿಯಲ್ಲಿ 26 ಮೃತರ ಕುಟುಂಬಗಳಿಗೆ ಶೃಂಗೇರಿ ಮಠದಿಂದ 2 ಲಕ್ಷ ರೂ. ಪರಿಹಾರ

ಚಿಕ್ಕಮಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಂ ಬಳಿ (Pahalgam Attack) ನಡೆದ ಭಯೋತ್ಪಾದಕ ದಾಳಿಯನ್ನು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾ ಮಠ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಶ್ರೀಗಳು (Sri Vidhushekhara Bharati Swamiji) ಖಂಡಿಸಿದ್ದಾರೆ ಹಾಗೂ 26 ಜನ ಮೃತರ ಕುಟುಂಬಗಳಿಗೆ ಶೃಂಗೇರಿ ಮಠದಿಂದ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂತ್ರಸ್ತ ಹಿಂದೂಗಳ ಜೊತೆಗೆ ಹಿಂದೂಗಳೇ ನಿಲ್ಲಬೇಕಾಗಿದೆ ಎಂದು ಹೇಳಿದ್ದಾರೆ. ಅಕ್ಷಯ ತೃತೀಯದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಉಗ್ರರ ದಾಳಿಗೆ ತಮ್ಮ ಮನೆಯವರನ್ನು ಕಳೆದುಕೊಂಡವರ ನೋವಿನಲ್ಲಿ 26 ಕುಟುಂಬಸ್ಥರು ಇದ್ದಾರೆ. ಹಿಂದೂಗಳ ಜೊತೆ ಹಿಂದೂಗಳೇ ನಿಲ್ಲಬೇಕು. ಹಾಗಾಗಿ ಶೃಂಗೇರಿ ಶಾರದಾ ಪೀಠದ ವತಿಯಿಂದ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಹಣವನ್ನು ಪ್ರಸಾದದ ರೂಪದಲ್ಲಿ ನೀಡುತ್ತಿದ್ದೇವೆ. ದುಃಖದಲ್ಲಿರುವ ಕುಟುಂಬದಲ್ಲಿ ಸಂತೋಷ, ಶ್ರೇಯಸ್ಸು ವೃದ್ಧಿಸಲಿ ಎಂದು ಶ್ರೀಗಳು ತಿಳಿಸಿದ್ದಾರೆ.

ಈಗಾಗಲೇ ಪಹಲ್ಗಾಮ್ ದಾಳಿಯಲ್ಲಿ ಮೃತರಾದ ರಾಜ್ಯದವರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಮಠದ ವತಿಯಿಂದಲೂ 26 ಕುಟುಂಬಗಳಿಗೆ ತಲಾ 2 ಲಕ್ಷ ರೂ.ಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುವುದು. ಮಠದ ಆಡಳಿತಾಧಿಕಾರಿ ಅದನ್ನ ನೋಡಿಕೊಂಡು ಆ ಕುಟುಂಬಗಳಿಗೆ ತಲುಪಿಸುತ್ತಾರೆ ಎಂದು ಶ್ರೀಗಳು ತಿಳಿಸಿದರು.
ಮಂತ್ರಾಲಯ ಶ್ರೀಗಳಿಂದಲೂ ಪರಿಹಾರ ಘೋಷಣೆ
ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಮೂವರು ಕನ್ನಡಿಗರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ಮಠದ ವತಿಯಿಂದ ನೀಡಲಾಗುವುದು ಎಂದು ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಿಳಿಸಿದ್ದಾರೆ.
ಮೃತರ ಕುಟುಂಬದ ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಯನ್ನು ಮಂತ್ರಾಲಯ ಮಠ ವಹಿಸಿಕೊಳ್ಳಲಿದೆ. ಉಗ್ರರ ದಾಳಿಯಲ್ಲಿ ಮೃತಪಟ್ಟವರೆಲ್ಲರೂ ನಮ್ಮವರೇ. ನಮ್ಮ ಕುಟುಂಬದಲ್ಲಿ ಒಬ್ಬರನ್ನು ಕಳೆದುಕೊಂಡ ನೋವು ನಮಗಿದೆ. ಮೃತರು ಹಾಗೂ ಗಾಯಾಳುಗಳ ಜೊತೆಗೆ ನಾವಿದ್ದೇವೆ ಎಂದು ಶ್ರೀಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್‌, ನೀರಿನ ಸಂಪರ್ಕ; ಬಿಬಿಎಂಪಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement