ನವದೆಹಲಿ: ಪಾಕಿಸ್ತಾನದ ಭೈಒತ್ಪಾದಕ ನೆಲೆಗಳ ವಿರುದ್ಧ ಭಾರತದ ಆಪರೇಶನ್ ಸಿಂಧೂರ ಕಾರ್ಯಾಚರಣೆಯ ನಂತರ ಕದನ ವಿರಾಮಕ್ಕೆ ಒಪ್ಪಿದ ಕೆಲವೇ ದಿನಗಳಲ್ಲಿ, ಪಾಕಿಸ್ತಾನವು ಈಗ ಭಾರತಕ್ಕೆ ಪತ್ರ ಬರೆದಿದೆ. ಹಾಗೂ ಭಾರತವು ಸ್ಥಗಿತಗೊಳಿಸಿರುವ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ತನ್ನ ಪ್ರದೇಶಕ್ಕೆ ನದಿಗಳ ನೀರಿನ ಹರಿವನ್ನು ಪುನರಾರಂಭಿಸುವಂತೆ ಒತ್ತಾಯಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯವು ಭಾರತವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪತ್ರ ಬರೆದಿದೆ ಎಂದು ವರದಿಯಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸಿಂಧೂ ಜಲ ಒಪ್ಪಂದವು ಆರು ದಶಕಗಳಿಗೂ ಹೆಚ್ಚು ಕಾಲ ಉಳಿದುಕೊಂಡಿರುವ ಪ್ರಮುಖ ನೀರು ಹಂಚಿಕೆ ಒಪ್ಪಂದವಾಗಿದೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮತ್ತೊಂದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ದಾಳಿಯ ನಂತರ ಭಾರತ 1960 ರ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ ಈಗ ಮನವಿ ಬಂದಿದೆ.
“ಸಿಂಧೂ ನದಿ ನೀರು ಒಪ್ಪಂದವನ್ನು ತಡೆಹಿಡಿಯುವುದು ಏಕಪಕ್ಷೀಯ ಮತ್ತು ಕಾನೂನುಬಾಹಿರ… ಪಾಕಿಸ್ತಾನವು ಕೃಷಿ ಪ್ರಧಾನ ಆರ್ಥಿಕತೆಯಾಗಿದೆ. ಲಕ್ಷಾಂತರ ಜನರು ಈ ಒಪ್ಪಂದದಿಂದ ನಿಯಂತ್ರಿಸಲ್ಪಡುವ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಭಾರತದ ನಿರ್ಧಾರವು ಪಾಕಿಸ್ತಾನದ ಜನರು ಮತ್ತು ಅದರ ಆರ್ಥಿಕತೆಯ ಮೇಲಿನ ದಾಳಿ ಯುದ್ಧಕ್ಕೆ ಸಮಾನವಾಗಿದೆ” ಎಂದು ಪಾಕಿಸ್ತಾನ ಈ ಮೊದಲು ಹೇಳಿತ್ತು.
ಭಾರತವು ತನ್ನ ರಾಷ್ಟ್ರೀಯ ಭದ್ರತಾ ವಿಶೇಷಾಧಿಕಾರವನ್ನು ಬಳಸಿಕೊಂಡು, ಪಾಕಿಸ್ತಾನವು ಭಯೋತ್ಪಾದನೆಗೆ ತನ್ನ ಬೆಂಬಲವನ್ನು “ವಿಶ್ವಾಸಾರ್ಹವಾಗಿ ಮತ್ತು ಬದಲಾಯಿಸಲಾಗದಂತೆ” ಕೊನೆಗೊಳಿಸುವವರೆಗೆ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಕಾರ್ಯತಂತ್ರದ ವ್ಯವಹಾರಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಅತ್ಯುನ್ನತ ಸಂಸ್ಥೆಯಾದ ಭದ್ರತೆ ಕುರಿತ ಸಂಪುಟ ಸಮಿತಿ (CCS) ಈ ಕ್ರಮವನ್ನು ಅನುಮೋದಿಸಿದೆ, ಇದು ವಿಶ್ವಬ್ಯಾಂಕ್ ಮಧ್ಯಸ್ಥಿಕೆಯ ಈ ಒಪ್ಪಂದಕ್ಕೆ ನವದೆಹಲಿ ವಿರಾಮ ಹಾಕಿದ್ದು ಇದೇ ಮೊದಲು.
ಪತ್ರ ಬರೆದ ಪಾಕಿಸ್ತಾನ..
ಭಾರತದ ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಲಾದ ಪತ್ರದಲ್ಲಿ, ಪಾಕಿಸ್ತಾನ ಸಚಿವಾಲಯವು ಒಪ್ಪಂದವನ್ನು ಸ್ಥಗಿತಗೊಳಿಸುವುದರಿಂದ ಪಾಕಿಸ್ತಾನದಲ್ಲಿ ಬಿಕ್ಕಟ್ಟು ಉಂಟಾಗುತ್ತದೆ ಎಂದು ಹೇಳಿಕೊಂಡಿದೆ.
ಆದಾಗ್ಯೂ, ಪಾಕಿಸ್ತಾನವು ಭಯೋತ್ಪಾದನೆಯನ್ನು ದೀರ್ಘಕಾಲದಿಂದ ಸರ್ಕಾರದ ನೀತಿಯಾಗಿ ಬಳಸುತ್ತಿರುವುದನ್ನು ಸೂಚಿಸಿ ಭಾರತೀಯ ಅಧಿಕಾರಿಗಳು ಈ ಕಳವಳಗಳನ್ನು ತಳ್ಳಿಹಾಕಿದ್ದಾರೆ.
ಒಪ್ಪಂದವು ಮೂರು ಪಶ್ಚಿಮ ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್‌ಗಳನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡುತ್ತದೆ, ಆದರೆ ಪೂರ್ವ ನದಿಗಳಾದ ಸಟ್ಲೆಜ್, ಬಿಯಾಸ್ ಮತ್ತು ರಾವಿ ಭಾರತದೊಂದಿಗೆ ಉಳಿದಿವೆ. ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ತಡೆಯಲು ಭಾರತವು ಈಗ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಎಂಬ ಮೂರು ಹಂತದ ಕಾರ್ಯತಂತ್ರವನ್ನು ಘೋಷಿಸಿದೆ. ಒಂದು ಹನಿ ನೀರು ಕೂಡ ಭಾರತದ ಪ್ರದೇಶದಿಂದ ಹೋಗದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸರ್ಕಾರದ ನಿಲುವನ್ನು ಪ್ರಸ್ತಾಪಿಸುತ್ತ, “ಸಿಂಧೂ ಜಲ ಒಪ್ಪಂದವು ಸದ್ಭಾವನೆ ಮತ್ತು ಸ್ನೇಹದ ಮೇಲೆ ಸ್ಥಾಪಿತವಾಗಿದೆ. ಪಾಕಿಸ್ತಾನವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ಮೂಲಕ ಈ ಮೌಲ್ಯಗಳನ್ನು ತುಳಿದಿದೆ” ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಪ್ರಾರಂಭವಾದ ತ್ವರಿತ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಹನ್ನೊಂದು ವಾಯು ನೆಲೆಗಳಿಗೆ ಹಾನಿಯಾಯಿತು. ಇದರ ಪರಿಣಾಮವಾಗಿ ಸಂಕ್ಷಿಪ್ತ ಕದನ ವಿರಾಮ ಒಪ್ಪಂದವಾಯಿತು. ಆದರೆ ಭಾರತವು ಪಾಕಿಸ್ತಾನದ ಜೊತೆಗಿನ ಮಾತುಕತೆ ಈಗ ಭಯೋತ್ಪಾದನೆಯನ್ನು ಕೊನೆಗೊಳಿಸುವುದು ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂದಿರುಗಿಸುವುದು ಈ ಒಂದು ಕಾರ್ಯಸೂಚಿಗೆ ಸೀಮಿತವಾಗಿರುತ್ತದೆ ಎಂದು ಹೇಳಿದೆ.
ಆಪರೇಷನ್ ಸಿಂಧೂರ ನಂತರದ ತಮ್ಮ ಮೊದಲ ದೂರದರ್ಶನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರಾಜಿಯಾಗದ ನಿಲುವನ್ನು ಒತ್ತಿ ಹೇಳಿದರು. “ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂದು ಅವರು ಘೋಷಿಸಿದರು. “ಭಯೋತ್ಪಾದನೆ ಮತ್ತು ಮಾತುಕತೆ ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ