ಸಚಿವೆ ಹೆಬ್ಬಾಳ್ಕರ ವಿರುದ್ಧ ಅಶ್ಲೀಲ ಪದ ಬಳಕೆ: ಬಿಜೆಪಿ ಶಾಸಕ ಸಿ ಟಿ ರವಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

ನವದೆಹಲಿ : ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದ ಸಂಬಂಧ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ವಿರುದ್ಧ ಬೆಳಗಾವಿಯ ಬಾಗೇವಾಡಿ ಠಾಣೆಯಲ್ಲಿ ದಾಖಲಾಗಿರುವ ಕಿರುಕುಳ ಮತ್ತು ಮಹಿಳೆಯ ಘನತೆಗೆ ಹಾನಿ ಮಾಡಿದ ಆರೋಪದ ಪ್ರಕರಣದ ವಿಚಾರಣೆಗೆ ಸೋಮವಾರ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.
ಪ್ರಕರಣ ರದ್ದುಪಡಿಸಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ರಾಜೇಶ ಬಿಂದಾಲ್‌ ಅವರ ವಿಭಾಗೀಯ ಪೀಠ  ತಡೆಯಾಜ್ಞೆ ನೀಡಿದೆ.

ವಿಶೇಷ ನ್ಯಾಯಾಲಯದಲ್ಲಿರುವ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್‌ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆ ಮುಂದೂಡಿತು. ಸಿ ಟಿ ರವಿ ಪರವಾಗಿ ಹಿರಿಯ ವಕೀಲ ಮನನ್‌ ಕುಮಾರ್‌ ಮಿಶ್ರಾ ಮತ್ತು ವಕೀಲ ರಾಮಶಂಕರ ವಾದಿಸಿದ್ದರು.
ಶಾಸನಸಭೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಳಕೆ ಮಾಡಿದ ಪದಗಳಿಗೆ ಶಾಸಕರಿಗೆ ಇರುವ ರಕ್ಷಣೆ ವಿನಾಯಿತಿ ಅನ್ವಯಿಸುತ್ತದೆ. ರವಿ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಪದ ಮತ್ತು ಅವರ ನಡತೆಯು ಪ್ರಾಸಿಕ್ಯೂಷನ್‌ನಿಂದ ರಕ್ಷಣೆ ನೀಡುವುದಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಮೇ 2ರಂದು ಆದೇಶಿಸಿತ್ತು.

ಪ್ರಮುಖ ಸುದ್ದಿ :-   ಚುನಾವಣಾ ರಾಜಕೀಯಕ್ಕೆ ದಿಢೀರ್‌ ನಿವೃತ್ತಿ ಘೋಷಿಸಿದ ಸಹಕಾರ ಸಚಿವ ಕೆ. ಎನ್‌ ರಾಜಣ್ಣ...!

“ಆಕ್ಷೇಪಿತ ಪದ ಬಳಕೆ, ಅದನ್ನು ಬಳಕೆ ಮಾಡಿದ್ದರೆ ಅಥವಾ ನಡತೆ ತೋರಿದ್ದರೆ ಅದು ಮಹಿಳೆಯ ಘನತೆಗೆ ಹಾನಿ ಮಾಡುವುದಾಗಿದೆ. ಇದು ಯಾವುದೇ ರೀತಿಯಲ್ಲೂ ಸದನದ ಕಾರ್ಯನಿರ್ವಹಣೆಗೆ ಸಂಬಂಧಿಸಿಲ್ಲ… ಸಂಬಂಧವಿಲ್ಲ ಎಂದಾಗ ವಿನಾಯಿತಿ ಇರುವುದಿಲ್ಲ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ಹೈಕೋರ್ಟ್‌ ಆದೇಶಿಸಿತ್ತು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ನೀಡಿದ ದೂರಿನ ಹಿನ್ನೆಲೆಯಲ್ಲಿ ರವಿ ವಿರುದ್ಧ ಬೆಳಗಾವಿಯ ಬಾಗೇವಾಡಿ ಪೊಲೀಸರು 19.12.2024ರಂದು ಬಿಎನ್‌ಎಸ್‌ ಸೆಕ್ಷನ್‌ 75 (ಲೈಂಗಿಕ ಕಿರುಕುಳ) ಮತ್ತು 79 (ಮಹಿಳೆ ಘನತೆಗೆ ಹಾನಿ) ಅಡಿ ಪ್ರಕರಣ ದಾಖಲಿಸಿ, ರವಿ ಅವರನ್ನು ಬಂಧಿಸಿದ್ದರು. ಆನಂತರ ಹೈಕೋರ್ಟ್‌ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement