ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯಿದೆ- 2025ಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಮಧ್ಯಂತರ ಪರಿಹಾರದ ಕುರಿತು ತನ್ನ ಆದೇಶ ಕಾಯ್ದಿರಿಸುವ ಮೊದಲು ಮೂರು ದಿನಗಳ ಕಾಲ ಎಲ್ಲ ಪಕ್ಷಕಾರರ ವಾದ ಆಲಿಸಿತು.
ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ಸಾಲಿಸಿಟರ್ ಜೆನರಲ್ ತುಷಾರ ಮೆಹ್ತಾ ಅವರು, ವಕ್ಫ್ ಸೃಜನೆಗೆ ಅರ್ಹತೆ ಪಡೆಯಲು 5 ವರ್ಷಗಳ ಇಸ್ಲಾಂ ಧರ್ಮಪಾಲನೆಯ ಷರತ್ತನ್ನು ಸಮರ್ಥಿಸಿಕೊಂಡರು. ವಕ್ಫ್‌ಗೆ ದಾನ ನೀಡುವುದು ಹಾಗೂ ವಕ್ಫ್ ಸೃಜಿಸುವುದು ಇವೆರಡೂ ವಿಭಿನ್ನವಾದವು. ಮುಸ್ಲಿಮೇತರರು ವಕ್ಫ್‌ಗೆ ಯಾವಾಗಲೂ ದಾನ ಮಾಡಬಹುದೇ ಹೊರತು ಅವರು ವಕ್ಫ್ ಆಸ್ತಿಯನ್ನು ಸೃಜಿಸಲಾಗದು ಎಂದು ವಾದಿಸಿದರು.
ವಕ್ಫ್ ಹೆಸರಿನಲ್ಲಿ ಬುಡಕಟ್ಟು ಸಮುದಾಯದ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು. ಷರಿಯಾ ಕಾಯಿದೆಯಡಿಯಲ್ಲಿಯೂ ಮುಸ್ಲಿಂ ಎಂದು ಘೋಷಿಸುವುದು ಅತ್ಯಗತ್ಯ ಎಂದು ಮೆಹ್ತಾ ಗಮನಸೆಳೆದರು
ಪ್ರತಿವಾದಿಗಳ ಪರವಾಗಿ ಹಾಜರಾದ ಹಿರಿಯ ವಕೀಲ ರಂಜಿತಕುಮಾತ, ಕುರಾನ್ ಮತ್ತು ಮುಲ್ಲಾ ಅವರ ಮಹಮ್ಮದೀಯ ಕಾನೂನಿನ ಪುಸ್ತಕವನ್ನು ಉಲ್ಲೇಖಿಸಿ, ಒಬ್ಬ ವ್ಯಕ್ತಿ ತನ್ನ ಸ್ವಂತ ಆಸ್ತಿಯಾಗಿದ್ದರೆ ಮಾತ್ರ ಆ ಆಸ್ತಿಯನ್ನು ವಕ್ಫ್ ಆಗಿ ದಾನ ಮಾಡಬಹುದು ಎಂದು ಹೇಳಿದರು. ಉಳಿದ ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲರಾದ ರಾಕೇಶ್ ದ್ವಿವೇದಿ, ಗೋಪಾಲಶಂಕರ ನಾರಾಯಣನ್ ವಾದ ಮಂಡಿಸಿದರು.
ಅರ್ಜಿದಾರರನ್ನು ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ ಮನು ಸಿಂಘ್ವಿ, ರಾಜೀವ್ ಧವನ್, ಹುಝೆಫಾ ಅಹ್ಮದಿ ಮತ್ತು ಸಿ.ಯು. ಸಿಂಗ್ ಪ್ರತಿನಿಧಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ