ಹಾವೇರಿ: 2024ರ ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಜೈಲಿನಿಂದ ಬಿಡುಗಡೆಗೊಂಡ ಎಲ್ಲಾ ಆರೋಪಿಗಳು ವಿಜಯೋತ್ಸವ ಆಚರಿಸಿದ್ದು, ಹಾವೇರಿಯಿಂದ ಅಕ್ಕಿ ಆಲೂರುವರೆಗೆ ರೋಡ್ ಶೋ ನಡೆಸಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಇದರ ನಂತರ ಜಾಮೀನಿನನ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹಾಗೂ ಉಳಿದ ಮೂವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಗ್ಯಾಂಗ್ ರೇಪ್ ಸಂತ್ರಸ್ತೆ ಆರೋಪಿಗಳನ್ನು ಗುರುತಿಸುವಲ್ಲಿ ವಿಫಲವಾದ ಬಳಿಕ, ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ. ಹಾವೇರಿ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗುತ್ತಿದ್ದಂತೇ, ಏಳೂ ಆರೋಪಿಗಳು ಬೈಕ್ ಮತ್ತು ಕಾರಿನಲ್ಲಿ ಅಕ್ಕಿ ಆಲೂರುವರೆಗೆ ರೋಡ್ ಶೋ ನಡೆಸಿದರು ಎಂದು ಹೇಳಲಾಗಿದೆ.
ಜನವರಿ 8, 2024ರಂದು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ಮಹಿಳೆಯೋರ್ವಳು ದೂರು ನೀಡಿದ್ದಳು. ಪ್ರಕರಣದ ವಿಚಾರಣೆ ನಡೆಸಿದ್ದ ಹಾನಗಲ್ ಪೊಲೀಸರು, ಒಟ್ಟು 19 ಆರೋಪಿಗಳನ್ನು ಬಂಧಿಸಿದ್ದರು. ಆದರೆ ಈ ಪೈಕಿ 12 ಆರೋಪಿಗಳು 10 ತಿಂಗಳ ಹಿಂದೆಯೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆದರೆ ಉಳಿದ ಪ್ರಮುಖ 7 ಆರೋಪಿಗಳ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಹಲವು ಬಾರಿ ತಿರಸ್ಕರಿಸಿತ್ತು.
ತನ್ನ ಮೇಲೆ 7 ಜನ ಗ್ಯಾಂಗ್ ರೇಪ್ ಮಾಡಿದ್ದಾರೆಂದು ಆರೋಪಿಸಿದ್ದ ಸಂತ್ರಸ್ತೆ, ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಗಳನ್ನು ದೃಢೀಕರಿಸಲು ವಿಫಲವಾದ ಹಿನ್ನೆಲೆಯಲ್ಲಿ, ಈ ಆರೋಪಿಗಳಿಗೆ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ಜಾಮೀನಿನ ನಂತರ ಜಿಲ್ಲಾ ಕಾರಾಗೃಹದಿಂದ ಬಿಡುಗೊಂಡ ಬಳಿಕ 7 ಆರೋಪಿಗಳು ಹಾವೇರಿಯಿಂದ ಅಕ್ಕಿ ಆಲೂರುವರೆಗೆ ರೋಡ್ ಶೋ ನಡೆಸಿ ಸಂಭ್ರಮಾಚರಣೆ ಮಾಡಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆರೋಪಿಗಳು ಬೈಕ್ ಮತ್ತು ತೆರೆದ ಕಾರಿನಲ್ಲಿ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿರುವುದನ್ನು ವೀಡಿಯೊದಲ್ಲಿ ಕಂಡುಬಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ