ಬೆಂಗಳೂರು: ಇದೇ ಮೊದಲ ಬಾರಿಗೆ ವಿಧಾನಸಭೆಯ ಸಭಾಂಗಣದ ವೀಕ್ಷಣೆಗೆ (vidhana soudha tour) ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್‌ಗೆ (Guided tour) ಚಾಲನೆ ನೀಡಲಾಗಿದ್ದು, ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧದ ಗೈಡೆಡ್ ಟೂರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಬೆಳಗ್ಗೆ 8ರಿಂದ ಸಂಜೆ 5 ಗಂಟೆ ವರೆಗೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಸಮಯ ಹಾಗೂ ಶುಲ್ಕ (Fees) ನಿಗದಿ ಮಾಡಲಾಗಿದೆ.
ಜೂನ್ 1ರಿಂದ ವಿಧಾನಸೌಧ ಟೂರ್ ಗೈಡ್ ಪ್ರಾರಂಭವಾಗಲಿದೆ. ವಯಸ್ಕರಿಗೆ 16 ವರ್ಷ ಮೇಲ್ಪಟ್ಟ ವಯಸ್ಕರಿಗೆ 50 ರೂ. ಶುಲ್ಕ ನಿಗದಿಪಡಿಸಲಾಗಿದೆ. 15 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.
ಇದಕ್ಕಾಗಿ https://kstdc.co/activities ವೆಬ್‌ಸೈಟ್ ನಲ್ಲಿ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಕೊಳ್ಳಬೇಕು. 30 ಜನರನ್ನು ಒಳಗೊಂಡ ಗ್ರೂಪ್‌ನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗುತ್ತದೆ. ಒಂದು ಗ್ರೂಪ್‌ಗೆ 90 ನಿಮಿಷಗಳ ಅವಧಿ ಇರಲಿದ್ದು, ಒಂದು ದಿನಕ್ಕೆ 300 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರಲಿದೆ. ಒಂದೂವರೆ ಗಂಟೆ ಸಮಯ, ಒಂದೂವರೆ ಕಿ.ಮೀ. ನಡಿಗೆ ಇರಲಿದೆ. ವಿಕಾಸಸೌಧ ಪ್ರವೇಶದ್ವಾರದ (ಗೇಟ್ ನಂ.3) ಮೂಲಕ ಟೂರ್ ಆರಂಭವಾಗಲಿದೆ. ಭದ್ರತಾ ತಪಾಸಣೆ ದೃಷ್ಟಿಯಿಂದ ಟೂರ್ ಆರಂಭಕ್ಕೂ ಮುನ್ನ 20 ನಿಮಿಷ ಮುನ್ನ ಸ್ಥಳದಲ್ಲಿ ಇರಬೇಕು. ಬರುವವರು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೇರಿ ಸರ್ಕಾರದಿಂದ ವಿತರಿಸಿರುವ ಯಾವುದಾದರೂ ಅಧಿಕೃತ ಗುರುತಿನ ಚೀಟಿ ತರಬೇಕು. ಗೈಡ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಲಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ