ಕರ್ನಾಟಕದ ವಿವಿಧೆಡೆ 7 ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು : ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಗದಗ, ಬಾಗಲಕೋಟೆ, ಹಾವೇರಿ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Karnataka lokayukta raid) ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಧಾರವಾಡ, ಬಾಗಲಕೋಟೆ, ಗದಗ, ಹುನಗುಂದ, ಹಾವೇರಿ, ಬಳ್ಳಾರಿ, ಕಲಬುರಗಿ, ಉಡುಪಿ, ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಮನೆ, ಕಚೇರಿ ಸೇರಿದಂತೆ 6 ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಗದಗದ ಹುಡ್ಕೋ ಕಾಲೋನಿಯಲ್ಲಿರುವ ಗಂಗಾಧರ ಶಿರೋಳ ಮನೆ, ಸಂಬಂಧಿಕರ ಮನೆ ಸೇರಿದಂತೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಾವೇರಿ ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಳ್ಳಾರಿ ಪಿಡಬ್ಲ್ಯುಡಿ (PWD) ಸುಪರಿಡೆಂಟ್ ಇಂಜಿನಿಯರ್ ಅಮೀನ್ ಮುಕ್ತಾರ್ ಮನೆ ಲೋಕಾಯುಕ್ತ ದಾಳಿ ಮಾಡಿದ ಅಪಾರ ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿ 25 ಏಕರೆ ಜಮೀನಿನ ಆಸ್ತಿ ಪತ್ರ, ಕಲಬುರಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಪೆಟ್ರೋಲ್ ಬಂಕ್, ಒಂದು ಕ್ರಶರ್ ಮಷೀನ್ ಲೈಸನ್ಸ್ ಸೇರಿದಂತೆ ಇತರೆ ಆಸ್ತಿ ಪತ್ರಗಳು ಪತ್ತೆಯಾಗಿವೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಅರೋಪ ಹಿನ್ನೆಲೆಯಲ್ಲಿ ಕಾರ್ಕಳ ಮೆಸ್ಕಾಂ ವಿಭಾಗದ ಅಕೌಂಟ್ ಆಫಿಸರ್ ಗಿರೀಶ ರಾವ್ ಮೆನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಕಾರ್ಕಳದ ಮನೆ, ಕಚೇರಿ, ಸಂಬಂಧಿಕರ ಮನೆ ಸೇರಿದಂತೆ ಐದು ಕಡೆ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನೀಯರ್ ಎಚ್. ಸುರೇಶ ಮನೆ ಹಾಗೂ ಸರಕಾರಿ ಕ್ವಾರ್ಟರ್ಸ್ ಮೇಲೆ ದಾಳಿಯಾಗಿದೆ. ಧಾರವಾಡದ ಡಿಸಿ ಕಾಂಪೌಂಡ್‌ನಲ್ಲಿರುವ ಕಚೇರಿ, ಕೆಸಿಡಿ ವೃತ್ತದ ಬಳಿಯ ಮನೆ ಮೇಲೆ ದಾಳಿ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಸಕಾರಣವಿಲ್ಲದೆ ರಸ್ತೆಯಲ್ಲಿ ವಾಹನ ತಡೆಯುವಂತಿಲ್ಲ, ಕೀ ಕಸಿಯುವಂತಿಲ್ಲ : ಪೊಲೀಸರಿಗೆ ಡಿಜಿಪಿ ಖಡಕ್‌ ಸೂಚನೆ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದ ಗ್ರಾಮ ಪಂಚಾಯತಿ ಪಿಡಿಓ ಕಚೇರಿ ಮತ್ತು ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಬಾಡ ಗ್ರಾಮ ಪಂಚಾಯಿತಿ ಅಧಿಕಾರಿ ರಾಮಕೃಷ್ಣಪ್ಪ ಗುಡಗೇರಿ ಅವರ ಕಚೇರಿ ಹಾಗೂ ಅವರಿಗೆ ಸಂಬಂಧಿಸಿದ ಧಾರವಾಡ ಹಾಗೂ ದಾವಣಗೆರೆಯ ಕೆಲವೆಡೆಯೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ.ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ.
ಬೆಳಗಾವಿ: ಬೆಳಗಾವಿಯಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇವರಾಜ್ ಅರಸು ಅಭಿವೃದ್ಧಿ ‌ನಿಗಮದ ವ್ಯವಸ್ಥಾಪಕ ಸಿದ್ಧಲಿಂಗಪ್ಪ ಬಾನಸಿ ಅವರ ಬೆಳಗಾವಿಯ ವಿದ್ಯಾನಗರದಲ್ಲಿರುವ ಮನೆ, ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ಮನೆ ಹಾಗೂ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬಾಗಲಕೋಟೆ ಡಿಸಿ ಕಚೇರಿ ಲೆಕ್ಕಪತ್ರ ವಿಭಾಗದ ಪ್ರಥಮ ದರ್ಜೆ ಸಹಾಯಕ ಶ್ರೀಶೈಲ ತತ್ರಾಣಿ ಅವರಿಗೂ ಲೋಕಾಯುಕ್ತ ಶಾಕ್ ಕೊಟ್ಟಿದೆ. ಅಮೀನಗಢ ಪಟ್ಟಣದಲ್ಲಿರುವ ಶ್ರೀಶೈಲ ತತ್ರಾಣಿ ಅವರ ಮನೆ ಹಾಗೂ ಜ್ಯುವೆಲ್ಲರಿ ಶಾಪ್ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement