ಕ್ಷಮೆ ಕೇಳದ ಕಮಲ ಹಾಸನ್‌ ; ಸದ್ಯಕ್ಕೆ ಕರ್ನಾಟಕದಲ್ಲಿ ʼಥಗ್‌ ಲೈಫ್‌ʼ ಸಿನೆಮಾ ಬಿಡುಗಡೆ ಇಲ್ಲ

ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿಯ (ಕೆಎಫ್‌ಸಿಸಿ) ಜೊತೆಗೆ ಸಮಾಲೋಚನೆ ನಡೆಸುವವರೆಗೆ ಕರ್ನಾಟಕದಲ್ಲಿ ಕಮಲ ಹಾಸನ್‌ ಅಭಿನಯದ ʼಥಗ್‌ ಲೈಫ್‌ʼ ಚಿತ್ರ ಬಿಡುಗಡೆ ಮಾಡದಿರಲು ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯು ನಿರ್ಧರಿಸಿದ್ದರಿಂದ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮುಂದೂಡಿದೆ. ಈ ನಡುವೆ, ತನ್ನ ಹೇಳಿಯಲ್ಲಿ (ತಮಿಳಿನಿಂದ ಕನ್ನಡ ಜನಿಸಿದೆ ಎಂಬ ಹೇಳಿಕೆ ನೀಡಿರುವುದರ ಹಿಂದೆ) ಯಾವುದೇ ದುರುದ್ದೇಶವಿಲ್ಲದಿರುವುದರಿಂದ ಕ್ಷಮೆ ಕೋರುವುದಿಲ್ಲ ಎಂದು ಕಮಲ ಹಾಸನ್‌ ಹೇಳಿದ್ದಾರೆ.
ʼಥಗ್‌ ಲೈಫ್‌ʼ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ನಾರಾಯಣ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಇದಕ್ಕೂ ಮುನ್ನ, ಸುದೀರ್ಘ ವಿಚಾರಣೆ ನಡೆಸಿದ್ದ ಪೀಠವು ಕಮಲ ಹಾಸನ್‌ ಅವರಿಗೆ ಕನ್ನಡಿಗರ ಕ್ಷಮೆ ಕೋರುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲು ಸಲಹೆ ನೀಡಿತ್ತು. ಈ ಸಂಬಂಧ ಅವರಿಗೆ ಸೂಚನೆ ನೀಡಿ, ವಾದಿಸುವುದಾಗಿ ಪೀಠಕ್ಕೆ ತಿಳಿಸಿದ್ದ ಕಮಲ ಹಾಸನ್‌ ಪರ ವಕೀಲ ಧ್ಯಾನ್‌ ಚಿನ್ನಪ್ಪ ಅವರು ಮಧ್ಯಾಹ್ನದ ನಂತರದ ವಿಚಾರಣೆಯಲ್ಲಿ ಕೆಎಫ್‌ಸಿಸಿಗೆ ಕಮಲ್‌ ಹಾಸನ್‌ ಬರೆದಿರುವ ಪತ್ರವನ್ನು ಓದುವ ಮೂಲಕ ಕೆಎಫ್‌ಸಿಸಿ ಜೊತೆ ಸಮಾಲೋಚನೆ ನಡೆಸಲು ಅವರು ನಿರ್ಧರಿಸಿದ್ದಾರೆ ಎಂದು ಸಮರ್ಥನೆಗೆ ಮುಂದಾದರು. “ಸದ್ಯಕ್ಕೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡದಿರಲು ಕಮಲ ಹಾಸನ್‌ ನಿರ್ಧರಿಸಿದ್ದಾರೆ. ಹೀಗಾಗಿ, ಪೊಲೀಸ್‌ ರಕ್ಷಣೆ ಕೋರುವುದಿಲ್ಲ ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಜೂನ್‌ ೧೦ಕ್ಕೆ ಮುಂದೂಡಿತು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
“ಕನ್ನಡ ನಾಡು ಮತ್ತು ಕರ್ನಾಟಕದ ಬಗ್ಗೆ ಪ್ರೀತಿ ಇದೆ ಎಂದು ಕಮಲ ಹಾಸನ್‌ ಹೇಳಿದ್ದಾರೆ. ದುರುದ್ದೇಶವಿದ್ದರೆ ಮಾತ್ರ ಕ್ಷಮೆ ಕೋರಬೇಕು ಎಂದು ಕೆಎಫ್‌ಸಿಸಿಗೆ ಬರೆದಿರುವ ಪತ್ರದಲ್ಲಿ ಅವರು ಹೇಳಿದ್ದಾರೆ. ಸ್ಪಷ್ಟನೆ ನೀಡಿಲ್ಲ. ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ವಿಳಂಬ ಮಾಡಬಹುದು. ಈ ಬಗ್ಗೆ ಕೆಎಫ್‌ಸಿಸಿ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದಿದ್ದಾರೆ” ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

“ಅತ್ಯಂತ ಗೌರವಪೂರ್ವಕವಾಗಿ ಕಮಲ್ ಹಾಸನ್‌ ಹೇಳಿಕೆ ನೀಡಿದ್ದು, ಅದರಿಂದ ಹಿಂದೆ ಸರಿಯುವುದಿಲ್ಲ‌ ಎಂದಿದ್ದಾರೆ. ಸಮಾಲೋಚನೆ ನಡೆಸುವವರೆಗೆ ಸಿನಿಮಾ ಬಿಡುಗಡೆ ಮಾಡದಿರಲು ಅವರು ನಿರ್ಧರಿಸಿದ್ದಾರೆ” ಎಂದರು.
ಅದಕ್ಕೆ ಪೀಠವು “ಅಹಂ ಮುಂದೆ ಮಾಡಿದ್ದೀರಿ. ಅದು ಕಮಲ ಹಾಸನ್‌ ಅಥವಾ ಬೇರೆ ಯಾರೇ ಆಗಿರಬಹುದು. ಇದು ಜನರ ಭಾವನೆಗಳಿಗೆ ಹಾನಿ ಮಾಡುವ ವಿಚಾರವಾಗಿದೆ. ಅವರ ಹೇಳಿಕೆಯಿಂದ ಇಷ್ಟೆಲ್ಲಾ ಆಗಿದ್ದು, ಇದೆಲ್ಲವನ್ನೂ ಅವರ ಹೇಳಿಕೆಯೇ ನಿಲ್ಲಿಸಬಹುದು. ಕೆಎಫ್‌ಸಿಸಿಗೆ ಬರೆದಿರುವ ಪತ್ರದಲ್ಲಿ ಕ್ಷಮೆ ವಿಚಾರ ಹೊರತುಪಡಿಸಿ ಉಳಿದೆಲ್ಲವೂ ಇದೆ” ಎಂದು ಹೇಳಿತು.
ನಂತರ ಪೀಠವು ಕೇಂದ್ರ, ರಾಜ್ಯ ಸರ್ಕಾರ ಮತ್ತು ವಾಣಿಜ್ಯೋದ್ಯಮ ಮಂಡಳಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement