ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಆಗಸ್ಟ್ 15ರಿಂದ ಪ್ಲಾಸ್ಟಿಕ್ ಬಳಕೆಯಿಂದ ಮುಕ್ತಗೊಳಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ದೇವಸ್ಥಾನಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸೋಮವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ (ಮುಜರಾಯಿ) ಪ್ರಗತಿ ಪರಿಶೀಲನೆ ಸಭೆ ನಡೆಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹಲವಾರು ದೇವಾಲಯಗಳು ಪ್ರಸಾದ ವಿತರಿಸಲು ಪ್ಲಾಸ್ಟಿಕ್ ಕವರ್ಗಳು, ತೀರ್ಥಗಳಿಗೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಭಕ್ತರಿಗೆ ಕುಂಕುಮ ನೀಡಲು ಪ್ಲಾಸ್ಟಿಕ್ ಸ್ಯಾಚೆಟ್ಗಳನ್ನು ಬಳಸುತ್ತಿವೆ. ಇವುಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಬರುವ ಆಗಸ್ಟ್ 15 ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ದೇವಾಲಯಗಳಿಗೆ ಅಸ್ತಿತ್ವದಲ್ಲಿರುವ ಪ್ಲಾಸ್ಟಿಕ್ ಸ್ಟಾಕ್ ಅನ್ನು ವಿಲೇವಾರಿ ಮಾಡಲು ಎರಡು ತಿಂಗಳು ಕಾಲಾವಕಾಶ ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ 34,565 ಅಧಿಸೂಚಿತ ಮುಜರಾಯಿ ದೇವಾಲಯಗಳಿವೆ. ಈ ಪೈಕಿ 31,095 ದೇವಾಲಯಗಳ ಮಾಹಿತಿ ಲಭ್ಯವಿದೆ. ಉಳಿದ 3,470 ದೇವಾಲಯಗಳ ಮಾಹಿತಿ ಲಭ್ಯವಿಲ್ಲ. ಈ ಪೈಕಿ ಕಳೆದ ಮೂರು ತಿಂಗಳಲ್ಲಿ 1,253 ದೇವಾಲಯಗಳನ್ನು ಗುರುತಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಮಾಹಿತಿ ಲಭ್ಯವಿಲ್ಲದ ದೇವಾಲಯಗಳ ಮಾಹಿತಿ ಸಂಗ್ರಹಿಸಿ ಅಂತಿಮಪಟ್ಚಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 45,915 ಅಧಿಸೂಚಿತ ದೇವಾಲಯಗಳು ಮತ್ತು ಆಸ್ತಿಗಳಿವೆ. ಕಳೆದ ಮೂರು ತಿಂಗಳಲ್ಲಿ 11,332 ಆಸ್ತಿ ಗಳನ್ನು ಗುರುತಿಸಲಾಗಿದೆ. 9,883 ಆಸ್ತಿಗಳ ಸರ್ವೆ ಮಾಡಲಾಗಿದೆ. ಉಳಿದ ಆಸ್ತಿಗಳನ್ನು ಮೂರು ತಿಂಗಳೊಳಗೆ ಸ್ವಾಯಿತ್ವ ಯೋಜನೆಯಡಿ ಸರ್ವೆ ಮಾಡಿ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮುಜರಾಯಿ ದೇವಸ್ಥಾನಗಳ ಆಸ್ತಿಯನ್ನು ನಗರ, ಗ್ರಾಮಾಂತರ ಮತ್ತು ವ್ಯವಸಾಯ ಜಮೀನು ಎಂದು ವಿಂಗಡಿಸಿ ಸರ್ವೆ ಮಾಡಿಸಬೇಕು. ಏಕೆಂದರೆ, ರಾಜ್ಯದಲ್ಲಿ ಮುಜರಾಯಿ ದೇವಸ್ಥಾನಗಳನ್ನು ಗೆಜೆಟ್ ಅಧಿಸೂಚನೆ ಮಾಡಲಾಗಿದೆ. ಆದರೆ, ಅದರ ಆಸ್ತಿಗಳನ್ನು ಗೆಜೆಟ್ ಅಧಿಸೂಚನೆ ಮಾಡಿಲ್ಲ. ಹೀಗಾಗಿ ಸರ್ವೆ ಮಾಡಿದ ಆಸ್ತಿಗಳನ್ನು ಸೆಕ್ಷನ್ 31ರ ಅಡಿ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಸೂಚಿಸಲಾಗಿದೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ