ನವದೆಹಲಿ: ಸೈಪ್ರಸ್ ದೇಶದ ನಿಕೋಸಿಯಾ ಕೌನ್ಸಿಲ್ ಸದಸ್ಯೆ ಮೈಕೆಲಾ ಕೈಥ್ರಿಯೋಟಿ ಮ್ಲಾಪಾ ಅವರು ಗೌರವ ಸೂಚಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ.
ಐತಿಹಾಸಿಕ ನಿಕೋಸಿಯಾ ಕೇಂದ್ರದಲ್ಲಿ ಮ್ಲಾಪಾ ಅವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸುತ್ತಿದ್ದರು ಈ ವೇಳೆ ಅವರು ಪ್ರಧಾನಿ ಮೋದಿ ಅವರ ಪಾದಕ್ಕೆರಗಿ ನಮಸ್ಕರಿಸಿದ್ದಾರೆ. ಇದನ್ನು ಹೆಚ್ಚಾಗಿ ಭಾರತೀಯ ಸಂಪ್ರದಾಯದಲ್ಲಿ ಅನುಸರಿಸುತ್ತಾರೆ.
ಐತಿಹಾಸಿಕ ನಿಕೋಸಿಯಾ ಕೇಂದ್ರವು ಸೈಪ್ರಸ್ ರಾಜಧಾನಿಯ ಹಳೆಯ ಗೋಡೆಯಿಂದ ಆವೃತವಾದ ಭಾಗವಾಗಿದ್ದು, ವೆನೆಷಿಯನ್ ಕೋಟೆಗಳು, ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ರೋಮಾಂಚಕ ಮಾರುಕಟ್ಟೆಗಳಿಗೆ ಹೆಸರುವಾಸಿಯಾಗಿದೆ. ಇದು ಗ್ರೀಕ್ ಸೈಪ್ರಿಯೋಟ್ ಮತ್ತು ಟರ್ಕಿಶ್ ಸೈಪ್ರಿಯೋಟ್ ವಲಯಗಳನ್ನು ವಿಭಜಿಸುವ ಹಸಿರು ರೇಖೆಯ ಉದ್ದಕ್ಕೂ ಇರುವ ನಗರದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಜೀವಂತ ಜ್ಞಾಪನೆಯಾಗಿ ನಿಂತಿದೆ.
ಇದಕ್ಕೂ ಮೊದಲು, ಪ್ರಧಾನಿ ಮೋದಿ ಮತ್ತು ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ನಿಕೋಸಿಯಾದಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಪ್ರಧಾನಿ ಮೋದಿ ಅವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III ಪ್ರಶಸ್ತಿಯನ್ನು ನೀಡಲಾಗಿದೆ. ಇದು ಸೈಪ್ರಸ್ನಲ್ಲಿ ಗಣರಾಜ್ಯದ ಮೊದಲ ಅಧ್ಯಕ್ಷರ ಹೆಸರಿನಲ್ಲಿರುವ ಅತ್ಯುನ್ನತ ನಾಗರಿಕ ಗೌರವವಾಗಿದೆ. ರಾಷ್ಟ್ರಕ್ಕೆ ನೀಡಿದ ಅತ್ಯುತ್ತಮ ಸೇವೆಯನ್ನು ಗುರುತಿಸಿ ಮಹತ್ವದ ಸ್ಥಾನಮಾನ ಹೊಂದಿರುವ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಇತರರಿಗೆ ಈ ಗೌರವವನ್ನು ನೀಡಲಾಗುತ್ತದೆ. “ಈ ಗೌರವ ನನ್ನದು ಮಾತ್ರವಲ್ಲ, 140 ಕೋಟಿ ಭಾರತೀಯರ ಗೌರವ… ನಾನು ಈ ಗೌರವವನ್ನು ಭಾರತ ಮತ್ತು ಸೈಪ್ರಸ್ ನಡುವಿನ ಸ್ನೇಹ ಸಂಬಂಧಗಳು ಮತ್ತು ನಮ್ಮ ಪರಸ್ಪರ ಮೌಲ್ಯಗಳು ಮತ್ತು ತಿಳುವಳಿಕೆಗೆ ಅರ್ಪಿಸುತ್ತೇನೆ” ಎಂದು ಪ್ರಧಾನಿ ಮೋದಿ ತಮ್ಮ ಸ್ವೀಕಾರ ಭಾಷಣದಲ್ಲಿ ಹೇಳಿದ್ದರು.
23 ವರ್ಷಗಳಲ್ಲಿ ಭಾರತೀಯ ನಾಯಕರೊಬ್ಬರು ಸೈಪ್ರಸ್ಗೆ ನೀಡಿದ ಮೊದಲ ಭೇಟಿ ಇದಾಗಿದ್ದು, ನಿಕೋಸಿಯಾದಲ್ಲಿ ಟರ್ಕಿಗೆ ಬಲವಾದ ರಾಜತಾಂತ್ರಿಕ ಸಂದೇಶವಾಗಿ ಕಾಣುತ್ತಿದೆ. ಟರ್ಕಿ 1974 ರಿಂದ ದ್ವೀಪದ ಸುಮಾರು ಮೂರನೇ ಒಂದು ಭಾಗವನ್ನು ಆಕ್ರಮಿಸಿಕೊಂಡಿದೆ ಮತ್ತು ಇತ್ತೀಚೆಗೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದೆ.
ಪಾಕಿಸ್ತಾನದ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ನಂತರ ಪ್ರಧಾನಿ ಮೋದಿ ಅವರ ಮೊದಲ ಅಂತಾರಾಷ್ಟ್ರೀಯ ಪ್ರವಾಸದಲ್ಲಿನ ಸೈಪ್ರಸ್ ಭೇಟಿಯು ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರ ಆಹ್ವಾನದ ಮೇರೆಗೆ ಅವರು ಸೈಪ್ರಸ್ಗೆ ಭೇಟಿ ನೀಡಿದ್ದಾರೆ ಮತ್ತು ಸುಮಾರು 100 ಅಧಿಕಾರಿಗಳ ಉನ್ನತ ಮಟ್ಟದ ನಿಯೋಗ ಅವರ ಜೊತೆಗಿದೆ. ಮೋದಿ ಅವರ ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಸೈಪ್ರಸ್ ಮೊದಲ ದೇಶವಾಗಿದ್ದು, ಇದು ಅವರನ್ನು G-7 ಶೃಂಗಸಭೆಗಾಗಿ ಕೆನಡಾ ಮತ್ತು ನಂತರ ಕ್ರೊಯೇಷಿಯಾಕ್ಕೆ ಭೇಟಿ ನೀಡಲಿದ್ದಾರೆ. ಇದು ಭಾರತೀಯ ಪ್ರಧಾನಿಯೊಬ್ಬರು ಕ್ರೊಯೇಷಿಯಾಕ್ಕೆ ನೀಡುವ ಮೊದಲ ಭೇಟಿಯಾಗಿದೆ.
ಮರಾಪೆ ಸಹ ಇದೇ ರೀತಿ ಮಾಡಿದ್ದರು…
2023 ರಲ್ಲಿ, ಗೌರವದ ಸೂಚಕವಾಗಿ, ಪಪುವಾ ನ್ಯೂಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ ತಮ್ಮ ರಾಷ್ಟ್ರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದರು. ವಿಮಾನದಿಂದ ಇಳಿಯುತ್ತಿದ್ದಂತೆಯೇ ಮರಾಪೆ ಮೋದಿಯವರನ್ನು ಸ್ವತಂಹ ಸವಾಗತಿಸಿದ್ದರು. ಹಾಗೂ ಈ ವೇಳೆ ಪಾದಮುಟ್ಟಿ ನಮಸ್ಕರಿಸಿದ್ದರು. ಸೂರ್ಯಾಸ್ತದ ನಂತರ ಯಾರನ್ನೂ ಸ್ವಾಗತಿಸದ ಸಂಪ್ರದಾಯವನ್ನು ಪಪುವಾ ನ್ಯೂಗಿನಿಯಾ ಹೊಂದಿದೆ. ಆದರೆ ಪ್ರಧಾನಿ ಮೋದಿಗೆ ಗನ್ ಸೆಲ್ಯೂಟ್, ರೆಡ್ ಕಾರ್ಪೆಟ್ ಸ್ವಾಗತ ನೀಡಲಾಯಿತು ಮತ್ತು ಅವರನ್ನು ಮಾರಾಪೆ ವೈಯಕ್ತಿಕವಾಗಿ ಸ್ವಾಗತಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ